ಚೆನ್ನೈ: ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಇಂದು (ಮಂಗಳವಾರ) ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ತಮಿಳುನಾಡಿನ ಚೆನ್ನೈ, ತಿರುವಳ್ಳೂರು, ಚೆಂಗಲ್ಪಟ್ಟು ಮತ್ತು ಕಾಂಚೀಪುರಂ, ತಿರುವಣ್ಣಾಮಲೈ, ವಿಲ್ಲುಪುರಂ, ಕಡಲೂರು, ಮೈಲಾಡುತುರೈ, ತಂಜಾವೂರು, ಅರಿಯಲೂರು, ಪೆರಂಬಲೂರು, ಕಲ್ಲಕುರಿಚ್ಚಿ, ವೆಲ್ಲೂರು, ತಿರುಪತ್ತೂರು, ಧರ್ಮಪುರಿ, ಕೃಷ್ಣಗಿರಿ ಸೇಲಂ, ನಾಮಕ್ಕಲ್, ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಮಿಳುನಾಡಿನಲ್ಲಿ ಸೋಮವಾರ ಧಾರಾಕಾರ ಮಳೆ, ಗಾಳಿಯಿಂದ ಸಂಭವಿಸಿದ ಅವಘಡಗಳಲ್ಲಿ ಮಹಿಳೆ ಸೇರಿ ಐವರು ಮೃತಪಟ್ಟಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ.
ರಾಜಧಾನಿ ಚೆನ್ನೈ ಮತ್ತು ನೆರೆಯ ಮೂರು ಜಿಲ್ಲೆಗಳಲ್ಲಿ ಮಿಚಾಂಗ್ ತೀವ್ರ ಪರಿಣಾಮ ಬೀರಿದೆ. ಕಳೆದೆರಡು ದಿನದಲ್ಲಿ 40 ಸೆಂ.ಮೀ ಮಳೆ ಆಗಿದೆ. ಚೆನ್ನೈ ವಿಮಾನ ನಿಲ್ದಾಣ, ಪಾಲಿಕೆ ಆವರಣ, ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ. ಜನಜೀವನ ನಿಯಂತ್ರಣ ತಪ್ಪಿದೆ.
ರಜೆ ಘೋಷಣೆ: ತಮಿಳುನಾಡು ಸರ್ಕಾರ, ಚೆನ್ನೈ ಹಾಗೂ ತಿರುವಲ್ಲೂರು, ಕಾಂಚೀಪುರಂ, ಚೆಂಗಲಪಟ್ಟು ಜಿಲ್ಲೆಗಳಲ್ಲಿ ಡಿ.5ರಂದು ರಜೆ ಘೋಷಿಸಿದೆ. ಅಗ್ನಿಶಾಮಕ ಸೇವೆ, ಆಸ್ಪತ್ರೆ, ಪೆಟ್ರೋಲ್ ಬಂಕ್, ಹೋಟೆಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ.
ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಬರಬಾರದು, ಸುರಕ್ಷತೆ ದೃಷ್ಟಿಯಿಂದ ಮನೆಯಲ್ಲಿಯೇ ಉಳಿಯಬೇಕು ಎಂದು ಮನವಿ ಮಾಡಿದೆ. ಚೆನ್ನೈ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಸೋಮವಾರ ಶಾಲೆ–ಕಾಲೇಜು, ಸರ್ಕಾರಿ ಕಚೇರಿಗಳು ಬಹುತೇಕ ಕಾರ್ಯನಿರ್ವಹಿಸಲಿಲ್ಲ.
ಚೆನ್ನೈ ವಿಮಾನನಿಲ್ದಾಣ ರನ್‌ವೇ ಜಲಾವೃತಗೊಂಡಿದ್ದರಿಂದ ಅಧಿಕಾರಿಗಳು ಬೆಳಿಗ್ಗೆ 11 ಗಂಟೆವರೆಗೆ 70 ವಿಮಾನಗಳ ಯಾನ ರದ್ದುಪಡಿಸಿದರು. ರೈಲು, ಬಸ್ಸುಗಳ ಸಂಚಾರವೂ ವಿಳಂಬ ಅಥವಾ ರದ್ದತಿ ಕಾರಣದಿಂದಾಗಿ ವ್ಯತ್ಯಯಗೊಂಡಿತು. ಕೊಯಮತ್ತೂರು, ಮೈಸೂರು ಕಡೆಗೆ ತೆರಳಬೇಕಿದ್ದ ರೈಲುಗಳ ಸಂಚಾರ ರದ್ದಾಗಿದೆ ಎಂದು ರೈಲ್ವೆ ಇಲಾಖೆಯು ತಿಳಿಸಿದೆ. ಅಲ್ಲದೆ, ಚೆನ್ನೈನಲ್ಲಿ 14 ಸಬ್‌ವೇಗಳು ಜಲಾವೃತವಾಗಿದ್ದು, ಸಂಚಾರ ಸ್ಥಗಿತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.