ಮುಂಬೈ: ಮುಂಬೈಗೆ ಭಾರಿ ಹಾನಿ ಮಾಡಬಹುದು ಎಂಬ ಭೀತಿ ಹುಟ್ಟಿಸಿದ್ದ ‘ನಿಸರ್ಗ’ ಚಂಡಮಾರುತವು, ನೆಲವನ್ನು ಸ್ಪರ್ಶಿಸಿದ ನಂತರ ತೀವ್ರತೆ ಕಳೆದುಕೊಂಡಿದೆ. ಮುಂಬೈನಲ್ಲಿ ಹೆಚ್ಚಿನ ಹಾನಿ ಮಾಡದೆ, ಮುಂದಕ್ಕೆ ಸಾಗಿದೆ.
ಮುಂಬೈನಿಂದ ದಕ್ಷಿಣಕ್ಕೆ 100 ಕಿ.ಮೀ. ದೂರದಲ್ಲಿರುವ ಅಲೀಬಾಗ್ ಪಟ್ಟಣದ ಬಳಿ ಚಂಡಮಾರುತವು ಬುಧವಾರ ಮಧ್ಯಾಹ್ನ ನೆಲವನ್ನು ಸ್ಪರ್ಶಿಸಿತು. ಆಗ ಗಾಳಿಯ ವೇಗ ಗಂಟೆಗೆ 120 ಕಿ.ಮೀ.ನಷ್ಟಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಅದರ ವೇಗ 80 ಕಿ.ಮೀ.ಗೆ ತಗ್ಗಿತು. ನಿರೀಕ್ಷಿಸಿದ್ದಕ್ಕೆ ವ್ಯತಿರಿಕ್ತವಾಗಿ ಮುಂಬೈನಲ್ಲಿ ಭಾರಿ ಮಳೆ ಆಗಲಿಲ್ಲ. ಚಂಡಮಾರುತದ ಕೇಂದ್ರವು ಈಗ ಪುಣೆ ಜಿಲ್ಲೆಯಲ್ಲಿದ್ದು, ಕೆಲವು ಗಂಟೆಗಳಲ್ಲಿ ಇನ್ನಷ್ಟು ತೀವ್ರತೆ ಕಳೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂಬೈ, ರಾಯಗಡ, ರತ್ನಗಿರಿ, ಸಿಂಧುದುರ್ಗ ಮತ್ತು ಪುಣೆ ಜಿಲ್ಲೆಗಳಲ್ಲಿ ಭಾರಿ ವೇಗವಾಗಿ ಗಾಳಿ ಬೀಸಿದ ಕಾರಣ ಕೆಲವು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ.
ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಬಂದಿದ್ದ ಸರಕು ಸಾಗಣೆ ವಿಮಾನವು, ನೆಲಕ್ಕೆ ಇಳಿದ ನಂತರ ರನ್‌ವೇಯಿಂದ ಜಾರಿತ್ತು. ಯಾವುದೇ ಅನಾಹುತ ಸಂಭವಿಸಿಲ್ಲ. ಸಂಜೆ 7ರವರೆಗೆ ವಿಮಾನ ಸಂಚಾರ ಸ್ಥಗಿತಗೊಳಿಸಲು ಆದೇಶಿಸಲಾಗಿತ್ತು. ಚಂಡಮಾರುತ ತೀವ್ರತೆ ಕಳೆದುಕೊಂಡ ಕಾರಣ ಸಂಜೆ 6ಕ್ಕೇ ಸಂಚಾರ ಆರಂಭಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.