ADVERTISEMENT

ನಿಸರ್ಗ ಚಂಡಮಾರುತ: ರಾಯ್‌ಗಢದಲ್ಲಿ ವ್ಯಕ್ತಿ ಸಾವು, ನೂರಾರು ಮನೆಗಳಿಗೆ ಹಾನಿ

ಏಜೆನ್ಸೀಸ್
Published 3 ಜೂನ್ 2020, 15:06 IST
Last Updated 3 ಜೂನ್ 2020, 15:06 IST
ಸಿಂಧುದುರ್ಗ್ ಜಿಲ್ಲೆಯಲ್ಲಿ ಗಾಳಿ, ಮಳೆಗೆ ಮರಗಳು ಬಿದ್ದ ಪರಿಣಾಮ ಹತ್ತಾರು ಮನೆಗಳಿಗೆ ಹಾನಿಯಾಗಿದೆ -ಎನ್‌ಡಿಆರ್‌ಎಫ್ ಚಿತ್ರಗಳು
ಸಿಂಧುದುರ್ಗ್ ಜಿಲ್ಲೆಯಲ್ಲಿ ಗಾಳಿ, ಮಳೆಗೆ ಮರಗಳು ಬಿದ್ದ ಪರಿಣಾಮ ಹತ್ತಾರು ಮನೆಗಳಿಗೆ ಹಾನಿಯಾಗಿದೆ -ಎನ್‌ಡಿಆರ್‌ಎಫ್ ಚಿತ್ರಗಳು   

ಮುಂಬೈ: ನಿಸರ್ಗ ಚಂಡಮಾರುತ ಅಪ್ಪಳಿಸಿದ ಪರಿಣಾಮ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ನೂರಾರು ಮನೆಗಳಿಗೆ ಹಾನಿಯಾಗಿದೆ. ರಾಯ್‌ಗಢದಲ್ಲಿ (ಅಲೀಭಾಗ್‌) ವಿದ್ಯುತ್ ಕಂಬ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಸಿಂಧುದುರ್ಗ್ ಜಿಲ್ಲೆಯಲ್ಲಿ ಗಾಳಿ, ಮಳೆಗೆ ಮರಗಳು ಬಿದ್ದ ಪರಿಣಾಮ ಹತ್ತಾರು ಮನೆಗಳಿಗೆ ಹಾನಿಯಾಗಿದೆ.

ರೋಹ, ರೆವಾಂಡ ಮತ್ತು ಶ್ರೀವರ್ಧನ್ ಪ್ರದೇಶಗಳಲ್ಲಿ ಅನೇಕ ಮರಗಳು ಧರಾಶಾಯಿಯಾಗಿವೆ. ಮುಂಬೈ–ಪುಣೆ ಎಕ್ಸ್‌ಪ್ರೆಸ್ ವೇ ಮೇಲೆಯೂ ಅನೇಕ ಮರಗಳು ಬಿದ್ದಿವೆ. ಆದರೆ ವಾಹನ ಸಂಚಾರಕ್ಕೆ ತೊಡಕಾಗಿಲ್ಲ ಎಂದು ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ಕಮಾಂಡರ್ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ.

ADVERTISEMENT

ಗಂಟೆಗೆ ಸುಮಾರು 90ರಿಂದ 100 ಕಿಲೋ ಮೀಟರ್ ವೇಗದಲ್ಲಿ ನಿಸರ್ಗ ಚಂಡಮಾರುತ ಅಪ್ಪಳಿಸಿದೆ. ರಾಯ್‌ಗಢ ಕರಾವಳಿಗೆ ಅಪ್ಪಳಿಸುವ ವೇಳೆ ಅದರ ತೀವ್ರತೆ ಗಂಟೆಗೆ 100ರಿಂದ 110 ಕಿಲೋ ಮೀಟರ್‌ಗಳಷ್ಟು ಇತ್ತು ಎಂದು ಮೂಲಗಳು ತಿಳಿಸಿವೆ.

‘ಚಂಡಮಾರುತದಿಂದ ಮುಂಬೈಗೆ ಎದುರಾದ ಬೀತಿ ಬಹುತೇಕ ದೂರವಾಗಿದೆ. ರಾತ್ರಿಯಿಡೀ ಮಳೆಯಾಗುವ ಸಾಧ್ಯತೆ ಇದೆ. ಆದರೂ ಗಂಟೆಗೆ 50 ಕಿಲೋಮೀಟರ್‌ಗಿಂತ ಹೆಚ್ಚು ವೇಗದಲ್ಲಿ ಗಾಳಿ ಬೀಸದು’ ಎಂದು ಸ್ಕೈಮೆಟ್‌ ವೆದರ್‌ನ ಹವಾಮಾನ ಬದಲಾವಣೆ ವಿಭಾಗದ ಉಪಾಧ್ಯಕ್ಷ ಮಹೇಶ್ ಪಲ್ವತ್ ಟ್ವೀಟ್ ಮಾಡಿದ್ದಾರೆ.

ಚಂಡಮಾರುತದ ಹಿನ್ನೆಲೆಯಲ್ಲಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಪುನರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.