ADVERTISEMENT

Cyclone Remal |ಅಸ್ಸಾಂನಲ್ಲಿ ಭಾರಿ ಮಳೆ ಸಾಧ್ಯತೆ: 7 ಜಿಲ್ಲೆಗಳಿಗೆ ರೆಡ್ ಅಲರ್ಟ್

ಪಿಟಿಐ
Published 27 ಮೇ 2024, 3:05 IST
Last Updated 27 ಮೇ 2024, 3:05 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಗುವಾಹಟಿ: ‘ರೀಮಲ್’ ಚಂಡಮಾರುತ ತೀವ್ರ ಸ್ವರೂಪ ಪಡೆಯುತ್ತಿದ್ದು, ಅಸ್ಸಾಂನಲ್ಲಿ ಭಾರಿ ಮಳೆಯಾಗುವ ಸಂಭವವಿದೆ. ಈ ಹಿನ್ನೆಲೆ 7 ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' ಹಾಗೂ 11 ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.

ಮೇ 26ರಂದು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಚಂಡಮಾರುತ ಬಳಿಕ ಈಶಾನ್ಯಕ್ಕೆ ಚಲಿಸುವ ಮುನ್ಸೂಚನೆಯಿದೆ. ಹಾಗಾಗಿ ಎಚ್ಚರಿಕೆಯಿಂದ ಇರುವಂತೆ ಮತ್ತು ಸುರಕ್ಷತಾ ಕ್ರಮ ಅನುಸರಿಸುವಂತೆ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ಅಲ್ಲಿನ ನಿವಾಸಿಗಳು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದೆ.

ADVERTISEMENT

ಸೋಮವಾರದಿಂದ 2 ದಿನಗಳ ಕಾಲ 42 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಈಶಾನ್ಯ ಗಡಿ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಮೇ 27 ಮತ್ತು 28 ರಂದು ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಧಿಕಾರಿಗಳೊಂದಿಗೆ ಪ್ರಧಾನಿ ಮಹತ್ವದ ಸಭೆ:

ರೀಮಲ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆ ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸಲು ಪ್ರಧಾನಿ ಮೋದಿ ಭಾನುವಾರ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ.

ಲೋಕ ಕಲ್ಯಾಣ ಮಾರ್ಗ ನಿವಾಸದಲ್ಲಿ ನಡೆದ ಸಭೆಯಲ್ಲಿ, ರಾಜ್ಯ ಮತ್ತು ಕೇಂದ್ರ ಸಚಿವಾಲಯ ಚಂಡಮಾರುತವನ್ನು ಎದುರಿಸಲು ಯಾವೆಲ್ಲಾ ಸಿದ್ಧತೆ ಮಾಡಿಕೊಂಡಿವೆ ಎಂಬುದರ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

'ರೀಮಲ್‌ ಚಂಡಮಾರುತ ಹಿನ್ನೆಲೆಯಲ್ಲಿ ಸನ್ನದ್ಧತೆ ಪರಿಶೀಲಿಸಲಾಗಿದೆ. ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ' ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ .

ಪಶ್ಷಿಮ ಬಂಗಾಳದ ಹಲವೆಡೆ ಭಾರಿ ಮಳೆ: ‌‌‌‌‌

ಭಾನುವಾರ ರಾತ್ರಿ ಪಶ್ಚಿಮ ಬಂಗಾಳದ ಕರಾವಳಿಗೆ ರೀಮಲ್‌ ಚಂಡಮಾರುತ ಬಂದು ಅಪ್ಪಳಿಸಿದೆ. ಗಂಟೆಗೆ 135 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ವಿವಿಧೆಡೆ ಭೂಕುಸಿತ ಸಂಭವಿಸಿದೆ. ಸೋಮವಾರ ಕೋಲ್ಕತ್ತಾ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಹಲವು ಪ್ರದೇಶಗಳು ‌‌ಜಲಾವೃತವಾಗಿದ್ದು, ನಿವಾಸಿಗಳ ಸಂಕಷ್ಟ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.