ADVERTISEMENT

Cyclone Remal Effect | ಭೂಕುಸಿತ: ಮಿಜೋರಾಂ-ಅಸ್ಸಾಂನಲ್ಲಿ 31 ಸಾವು

ರೀಮಲ್‌ ಪರಿಣಾಮ: ಮಿಜೋರಾಂ, ಅಸ್ಸಾಂನಲ್ಲಿ ದುರಂತ

ಪಿಟಿಐ
Published 28 ಮೇ 2024, 16:12 IST
Last Updated 28 ಮೇ 2024, 16:12 IST
ಮಿಜೋರಾಂನ ಐಜ್ವಾಲ್‌ನಲ್ಲಿ ಕಲ್ಲು ಗಣಿ ಕುಸಿದಿರುವ ಸ್ಥಳದಲ್ಲಿ ಶೋಧ ಕಾರ್ಯ ನಡೆದಿರುವುದು –ಪಿಟಿಐ ಚಿತ್ರ
ಮಿಜೋರಾಂನ ಐಜ್ವಾಲ್‌ನಲ್ಲಿ ಕಲ್ಲು ಗಣಿ ಕುಸಿದಿರುವ ಸ್ಥಳದಲ್ಲಿ ಶೋಧ ಕಾರ್ಯ ನಡೆದಿರುವುದು –ಪಿಟಿಐ ಚಿತ್ರ   

ಗುವಾಹಟಿ: ‘ರೀಮಲ್‌’ ಚಂಡಮಾರುತದ ಪರಿಣಾಮ ಸುರಿದ ಧಾರಾಕಾರ ಮಳೆಯಿಂದಾಗಿ ಮಿಜೋರಾಂ ಮತ್ತು ಅಸ್ಸಾಂನ ವಿವಿಧೆಡೆ ಭೂಕುಸಿತ ಸಂಭವಿಸಿದೆ. ಮಿಜೋರಾಂನಲ್ಲಿ 27 ಮತ್ತು ಅಸ್ಸಾಂನಲ್ಲಿ 4 ಮಂದಿ ಮೃತಪಟ್ಟಿದ್ದು, ಒಂಬತ್ತು ಮಂದಿ ‌ನಾಪತ್ತೆಯಾಗಿದ್ದಾರೆ.

ಮಿಜೋರಾಂ ಐಜ್ವಾಲ್‌ ಜಿಲ್ಲೆಯಲ್ಲಿ ಕಲ್ಲುಗಣಿ ಕುಸಿದ ಪರಿಣಾಮ 14 ಜನರು ಸತ್ತಿದ್ದು, ಇತರೆ ಏಳು ಮಂದಿ ನಾಪತ್ತೆಯಾಗಿದ್ದಾರೆ. ಉಳಿದಂತೆ ರಾಜ್ಯದಲ್ಲಿ ನಡೆದ ಪ್ರತ್ಯೇಕ ಭೂಕುಸಿತ ಅವಘಡಗಳಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಿಮೆನ್‌ನಲ್ಲಿ ನಾಲ್ವರು, ಸಲೇಂನಲ್ಲಿ ಮೂವರು, ಫಾಲ್ಕ್ಹಾನ್ ಮತ್ತು ಐಬಾಕ್‌ನಲ್ಲಿ ತಲಾ ಇಬ್ಬರು, ಲುಂಗ್ಸೆ, ಕೆಲ್ಸಿಹ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದರು.

ADVERTISEMENT

ಪ್ರಾಕೃತಿಕ ವಿಕೋಪ ಘಟನೆಗಳ ಬಳಿಕ, ಮುಖ್ಯಮಂತ್ರಿ ಲಾಲ್ದುಹೊಮಾ ಅವರು ತುರ್ತು ಸಭೆ ನಡೆಸಿದ್ದು, ಪರಿಸ್ಥಿತಿಯ ವಿವರ ಪಡೆದರು. ಮೃತರ ಕುಟುಂಬ ಸದಸ್ಯರಿಗೆ ತಲಾ ₹4 ಲಕ್ಷ ಪರಿಹಾರ ಘೋಷಿಸಿದರು.

ಐಜ್ವಾಲ್‌ ವರದಿ: ಮಿಜೋರಾಂನ ಮೆಲ್ತುಮ್‌ ಮತ್ತು ಲಿಮೆನ್‌ ನಡುವೆ ಮಂಗಳವಾರ ಕಲ್ಲುಗಣಿಯು ಕುಸಿದು, ಇಬ್ಬರು ಬಾಲಕರು ಸೇರಿದಂತೆ ಒಟ್ಟು 14 ಮಂದಿ ಸತ್ತಿದ್ದು, ಏಳು ಮಂದಿ ನಾಪ‍ತ್ತೆಯಾಗಿದ್ದಾರೆ.

ಬೆಳಿಗ್ಗೆ ಸುಮಾರು 6 ಗಂಟೆಯ ವೇಳೆಗೆ ಈ ಅವಘಡ ಸಂಭವಿಸಿದೆ. ಧಾರಾಕಾರ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ. ನಾಪತ್ತೆ ಆದವರು ಅವಶೇಷಗಳ ನಡುವೆ ಹೂತುಹೋಗಿರಬಹುದು ಎಂದು ಜಿಲ್ಲಾಧಿಕಾರಿ ನಾಜುಕ್‌ ಕುಮಾರ್ ತಿಳಿಸಿದರು.

ರಾಜ್ಯವು ದೇಶದ ಇತರೆ ಭಾಗಗಳಿಂದ ಸಂಪರ್ಕ ಕಡಿದುಕೊಂಡಿದೆ ಎಂದು ಡಿಜಿಪಿ ಅನಿಲ್‌ ಶುಕ್ಲಾ ತಿಳಿಸಿದರು. ಭೂಕುಸಿತದಿಂದಾಗಿ ಮೃತರಾದವರಲ್ಲಿ 4  ವರ್ಷದ ಬಾಲಕ, 6 ವರ್ಷದ ಬಾಲಕಿ ಸೇರಿದ್ದಾರೆ. ಅವಘಡದ ಸ್ಥಳದಿಂದ ಇಬ್ಬರನ್ನು ರಕ್ಷಿಸಲಾಗಿದೆ. ಇನ್ನೊಂದೆಡೆ, ಭೂ ಕುಸಿತದಿಂದಾಗಿ ಕಟ್ಟಡವೊಂದು ನೆಲಸಮವಾಗಿದೆ. ಅಲ್ಲಿ, ಮೂವರು ನಾಪತ್ತೆಯಾಗಿರುವ ಮಾಹಿತಿ ಇದೆ ಎಂದು ತಿಳಿಸಿದರು.

ಅಸ್ಸಾಂನಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ 17 ವರ್ಷದ ವಿದ್ಯಾರ್ಥಿ ಸೇರಿ ನಾಲ್ವರು ಮೃತಪಟ್ಟರು. ಸಾನಿಟ್‌ಪುರ್‌ ಜಿಲ್ಲೆಯಲ್ಲಿ ಮರವು ಆಟೊರಿಕ್ಷಾ ಮೇಲೆ ಉರುಳಿದ್ದು, ವಿದ್ಯಾರ್ಥಿ ಮೃತಪಟ್ಟಿದ್ದು, ಇತರೆ 17 ವಿದ್ಯಾರ್ಥಿಗಳು  ಗಾಯಗೊಂಡರು. 

ಧೇಮಾಜಿ ಜಿಲ್ಲೆಯಲ್ಲಿ ಎಚ್‌ಎಚ್‌ಪಿಸಿ ಯೋಜನೆ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕನೊಬ್ಬ ಮೃತಪಟ್ಟರು. ತುರ್ತು ಪರಿಹಾರ ಕಾರ್ಯಗಳಿಗೆ ಅಗತ್ಯ ಕ್ರಮವಹಿಸಲು ಮುಖ್ಯಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ತಿಳಿಸಿದರು.

ರಜೆ ಘೋಷಿಸದ ನಿರ್ಲಕ್ಷ್ಯಕ್ಕೆ ಆಕ್ರೋಶ

ರೀಮಲ್ ಚಂಡಮಾರುತ ಕುರಿತ ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ ನಡುವೆಯೂ ಅಸ್ಸಾಂನ ಚಂಡಮಾರುತ ಬಾಧಿತ ಪ್ರದೇಶಗಳ ಶಾಲೆಗಳಿಗೆ ರಜೆ ಘೋಷಿಸದೇ ನಿರ್ಲಕ್ಷ್ಯ ವಹಿಸಿದ್ದೇ ಅವಘಡದಲ್ಲಿ ವಿದ್ಯಾರ್ಥಿ ಸಾಯಲು ಕಾರಣ ಎಂದು ಹಲವರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು. ಧಾರಾಕಾರ ಮಳೆ ಮುನ್ಸೂಚನೆ ಹಿನ್ನೆಲೆ‌ಯಲ್ಲಿ ಮಿಜೋರಾಂ ಸರ್ಕಾರ ಮಂಗಳವಾರ ಎಲ್ಲ ಶಿಕ್ಷಣ ಸಂಸ್ಥೆಗಳು ಕಚೇರಿಗಳಿಗೆ ರಜೆ ಘೋಷಿಸಿತ್ತು. ಮಿಜೋರಾಂ ರಾಜಧಾನಿಗೆ ಸಂಪರ್ಕ ಕಲ್ಪಿಸಬೇಕಿದ್ದ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.