ADVERTISEMENT

ಚಂಡಮಾರುತಗಳ ಹುಟ್ಟು, ಸ್ವರೂಪ, ನಾಮಕರಣ, ಆರ್ಭಟದ ಸುತ್ತ...

​ಪ್ರಜಾವಾಣಿ ವಾರ್ತೆ
Published 1 ಮೇ 2019, 9:53 IST
Last Updated 1 ಮೇ 2019, 9:53 IST
   

ನವದೆಹಲಿ:ಒಡಿಶಾಕ್ಕೆ ಅಪ್ಪಳಿಸಲಿರುವ ‘ಫೋನಿ’ಚಂಡಮಾರುತ ಭೀಕರ ಸ್ವವರೂಪ ತಾಳುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.ಚಂಡಮಾರುತಗಳ ಹುಟ್ಟು, ಸ್ವರೂಪ, ನಾಮಕರಣದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಈ ಹಿಂದೆ ಅಮೆರಿಕದಲ್ಲಿ ‘ಸ್ಯಾಂಡಿ’ ನಮ್ಮಲ್ಲಿ `ನೀಲಂ’ ಚಂಡ ಮಾರುತಗಳು ಅಪಾರ ಪ್ರಮಾಣದ ಆಸ್ತಿ- ಪಾಸ್ತಿ ಮತ್ತು ಜೀವಹಾನಿಗೆ ಕಾರಣವಾಗಿವೆ. ಸಾಗರದಲ್ಲಿ ಹುಟ್ಟಿ ಭೂಮಿಯತ್ತ ಬಂದಾಗ ಸಾಗುವ ಮಾರ್ಗ ಮಧ್ಯೆ ಬಿರು ಮಳೆ ಸುರಿಸುತ್ತ, ತುಂಬ ವೇಗವಾಗಿ ಚಲಿಸುತ್ತ ಸಿಕ್ಕಿದ್ದನ್ನೆಲ್ಲ ನಾಶ ಮಾಡುವ ವಿನಾಶಕಾರಿ ಸುಂಟರಗಾಳಿಗಳ ಚಲನವಲನಗಳನ್ನು ಮುಂಚಿತವಾಗಿಯೇ ಊಹಿಸುವುದರಿಂದ ಸಂಭವನೀಯ ಅನಾಹುತ ತಡೆಯಲು ಕೆಲ ಮಟ್ಟಿಗೆ ಸಾಧ್ಯವಾಗುತ್ತದೆ.

ಚಂಡಮಾರುತ ರೂಪುಗೊಳ್ಳುವುದು ಹೀಗೆ...

ADVERTISEMENT

ವಾಯುಭಾರ ಕುಸಿತದ ಕೇಂದ್ರ ಬಿಂದುವಿನ ಸುತ್ತ ಗರಿಷ್ಠ ಒತ್ತಡದ ವ್ಯವಸ್ಥೆ ರೂಪುಗೊಂಡಾಗ ಚಂಡಮಾರುತ ರೂಪುಗೊಳ್ಳುತ್ತದೆ. ಪರಸ್ಪರ ವಿರುದ್ಧ ವರ್ತಿಸುವ ಶಕ್ತಿಗಳು ಗಾಳಿ ರೂಪುಗೊಳ್ಳಲು ಕಾರಣವಾಗುತ್ತವೆ. ಇದರಿಂದ ಮಳೆ ಮೋಡಗಳು ನಿರ್ಮಾಣಗೊಳ್ಳುತ್ತವೆ. ಭೂ ಮೇಲ್ಮೈನಲ್ಲಿನ ಬಿಸಿ ಗಾಳಿಯ ಫಲವಾಗಿ ಸ್ಥಳೀಯವಾಗಿ ವಾಯುಭಾರ ಕುಸಿತ ಉಂಟಾಗಿ ಸಣ್ಣ ಪ್ರಮಾಣದ ಸುಂಟರಗಾಳಿ ನಿರ್ಮಾಣಗೊಳ್ಳುತ್ತದೆ.

ಸಮುದ್ರದಲ್ಲಿಯೂ ಇದೆ ಬಗೆಯ ವಿದ್ಯಮಾನಗಳು ಘಟಿಸುತ್ತವೆ. ಇವು ರೂಪುಗೊಳ್ಳುವ ಸ್ಥಳ, ಅವುಗಳ ಸಾಮರ್ಥ್ಯ, ಸಾಗುವ ವೇಗ ಆಧರಿಸಿ ಅವುಗಳಿಗೆ ವಾಯುಭಾರ ಕುಸಿತ, ಬಿರುಗಾಳಿ, ಸುಂಟರಗಾಳಿ, ಚಂಡಮಾರುತ, ತೂಫಾನ್ ಮತ್ತಿತರ ಹೆಸರುಗಳಿಂದ ಕರೆಯುತ್ತಾರೆ.

ಅಟ್ಲಾಂಟಿಕ್ ಸಾಗರದಲ್ಲಿನ ಚಂಡ ಮಾರುತಕ್ಕೆ ಹರಿಕೇನ್ (hurricane), ಹಿಂದೂ ಮಹಾಸಾಗರದಲ್ಲಿನ ವಿದ್ಯಮಾನಕ್ಕೆ ಸೈಕ್ಲೋನ್ (cyclone) ಮತ್ತು ಫಿಲಿಪ್ಪೀನ್ಸ್ ಮತ್ತು ಫೆಸಿಫಿಕ್ ಸಾಗರದಲ್ಲಿನ ಬಿರುಗಾಳಿಗೆ ’ಟೈಫೂನ್’ (typhoon) ಎಂದು ಕರೆಯುತ್ತಾರೆ.

ಈ ಮೂರು ಚಂಡಮಾರುತಗಳ ಸ್ವರೂಪ ಒಂದೇ. ಆದರೆ, ಹೆಸರು ಬೇರೆ, ಬೇರೆಯಾಗಿರುತ್ತದೆ. ಇವು ನೀರಿನ ಮೇಲೆ (ಸಮುದ್ರದ ಮೇಲೆ) ರೂಪುಗೊಂಡರೆ, ಟಾರ್ನೆಡೊ ಭೂಮಿ ಮೇಲೆ ರೂಪುಗೊಳ್ಳುತ್ತವೆ. ಟಾರ್ನೆಡೊದ ಗಾತ್ರ ಮತ್ತು ತೀವ್ರತೆಯು ಸಾಗರದಲ್ಲಿನ ಚಂಡಮಾರುತಗಳಿಗೆ ಹೋಲಿಸಿದರೆ ತುಂಬ ಕಡಿಮೆ ಇರುತ್ತದೆ.

ವಿಭಿನ್ನ ಮಾನದಂಡ:ಹರಿಕೇನ್, ಸೈಕ್ಲೋನ್ ಮತ್ತು ಟೈಫೂನ್‌ಗಳನ್ನು ವಿಭಿನ್ನ ಮಾನದಂಡಗಳಿಂದ ಅಳೆಯಲಾಗುತ್ತದೆ. ಭಾರತದ ಪ್ರಾದೇಶಿಕ ಹವಾಮಾನ ಕೇಂದ್ರವು, ಗಂಟೆಗೆ 51 ಕಿ. ಮೀ ವೇಗದಲ್ಲಿ ಚಲಿಸುವ ಗಾಳಿಯನ್ನು ’ಸೈಕ್ಲೋನ್’ ಮತ್ತು 222 ಕಿ. ಮೀ ವೇಗದ ಗಾಳಿಯನ್ನು ’ಸೂಪರ್ ಸೈಕ್ಲೋನ್’ ಎಂದು ವಿಂಗಡಿಸುತ್ತಿದೆ.

ವಿಶಿಷ್ಟ ಹೆಸರು:ಈ ಚಂಡಮಾರುತಗಳು ಉಂಟು ಮಾಡುವ ಭಾರಿ ವಿನಾಶದಷ್ಟೆ ಅವುಗಳ ಹೆಸರುಗಳೂ ಅಷ್ಟೇ ವಿಶಿಷ್ಟವಾಗಿರುತ್ತವೆ. ಬಹುತೇಕ ಚಂಡಮಾರುತಗಳಿಗೆ ಸ್ತ್ರೀಯರ ಆಕರ್ಷಕ ಹೆಸರನ್ನೇ ನೀಡುತ್ತ ಬರಲಾಗಿದೆ.

ಜಿನೀವಾದಲ್ಲಿನ ವಿಶ್ವ ಹವಾಮಾನ ಸಂಘಟನೆಯು ಚಂಡಮಾರುತಗಳಿಗೆ ಹೆಸರು ಇಡುವ ಕೆಲಸ ನಿರ್ವಹಿಸುತ್ತಿದೆ. ಅಕಾರಾದಿಯಾಗಿ ಹೆಸರುಗಳನ್ನು ಬಳಸಲಾಗುತ್ತಿದ್ದು, ಪ್ರತಿ 6 ವರ್ಷಕ್ಕೆ ಈ ಪಟ್ಟಿ ಪುನರಾವರ್ತನೆಯಾಗಲಿದೆ. ಒಂದು ವೇಳೆ ಕೆಲ ಚಂಡಮಾರುತಗಳು ವ್ಯಾಪಕ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದ್ದರೆ ಅವುಗಳ ಹೆಸರುಗಳನ್ನು ಕೈಬಿಡಲಾಗುವುದು.

ಕತ್ರೀನಾ:2005ರಲ್ಲಿ ಅಮೆರಿಕದಲ್ಲಿ ಸಂಭವಿಸಿದ `ಕತ್ರೀನಾ’ ಬಿರುಗಾಳಿಯು ಲೂಸಿಯಾನಾ ಮತ್ತು ಮಿಸ್ಸಿಸ್ಸಿಪ್ಪಿಯಲ್ಲಿ 1,800 ಜನರನ್ನು ಬಲಿ ತೆಗೆದುಕೊಂಡು 10 ಲಕ್ಷ ಜನರನ್ನು ಸಂತ್ರಸ್ತಗೊಳಿಸಿತ್ತು.

ನರ್ಗಿಸ್:2008ರಲ್ಲಿ ಮ್ಯಾನ್ಮಾರ್‌ನಲ್ಲಿ `ನರ್ಗಿಸ್’ ಹಾವಳಿಯಲ್ಲಿ ಸಾವಿರಾರು ಜನರು ಮೃತಪಟ್ಟಿದ್ದರು.

ಮಾನವನ ಕೊಡುಗೆ?:ಮಾನವ ನಿರ್ಮಿತ ಜಾಗತಿಕ ತಾಪಮಾನವೂ ಸಾಗರಗಳ ಮೇಲಿನ ಮೇಲ್ಮೈ ಉಷ್ಣತೆ ಹೆಚ್ಚಳಗೊಳ್ಳಲು ಕಾರಣವಾಗುತ್ತಿದೆ. 1970ರಿಂದ ಈಚೆಗೆ ಸಾಗರಗಳ ಮೇಲ್ಮೈ ಉಷ್ಣತೆ 1 ಡಿಗ್ರಿ ಫ್ಯಾರನ್‌ಹೈಟ್ ಹೆಚ್ಚಳಗೊಂಡಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಬಿರುಗಾಳಿ ರೂಪುಗೊಳ್ಳಲು ಇದು ಕೂಡ ಕೊಡುಗೆ ನೀಡುತ್ತಿದೆ ಎನ್ನುತ್ತಾರೆ ಅವರು.

ನಾಮಕರಣ:ನೈರುತ್ಯ ಹಿಂದೂ ಮಹಾಸಾಗರದಲ್ಲಿ ರೂಪುಗೊಳ್ಳುವ ಚಂಡಮಾರುತಗಳಿಗೆ ಮಾರಿಷಸ್ ಮತ್ತು ಮಡಗಾಸ್ಕರ್‌ನಲ್ಲಿ ಇರುವ ಉಪ ಪ್ರಾದೇಶಿಕ ವಲಯದ ಚಂಡಮಾರುತ ಸಲಹಾ ಕೇಂದ್ರವು ನಾಮಕರಣ ಮಾಡುತ್ತದೆ. ಪ್ರತಿ ವರ್ಷ ಹೊಸ ಹೆಸರು ಪರಿಗಣಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.