ಗಾಂಧಿನಗರ:ಗುಜರಾತ್ ರಾಜ್ಯದ ತೀರ ಪ್ರದೇಶಗಳಿಗೆ ಅಪ್ಪಳಿಸಲಿದೆ ಎನ್ನಲಾಗಿದ್ದ ‘ವಾಯು’ ಚಂಡಮಾರುತ ದಿಕ್ಕು ಬದಲಿಸಿದ್ದು, ರಾಜ್ಯ ಹೆಚ್ಚಿನ ಅಪಾಯದಿಂದ ಪಾರಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಶುಕ್ರವಾರ ಹೇಳಿದ್ದಾರೆ.
ಮುಂಜಾಗ್ರತೆಯಾಗಿ ತೀರ ಭಾಗದ ಜಿಲ್ಲೆಗಳಿಂದ ಮೂರು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿತ್ತು. ವಿಮಾನಗಳ ಸಂಚಾರ, ಒಟ್ಟು 86 ರೈಲುಗಳ ಸಂಚಾರ ರದ್ದುಪಡಿಸಲಾಗಿತ್ತು. ಸ್ಥಳಾಂತರಗೊಂಡವರ ನೆರವಿಗೆ ಅಗತ್ಯ ಹಣಕಾಸು ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಚಂಡಮಾರುತದಿಂದ ಹೆಚ್ಚು ಹಾನಿ ಉಂಟಾಗಬಹುದು ಎಂದು 10 ಸ್ಥಳಗಳಲ್ಲಿ ನಿಯೋಜಿಸಿದ್ದ ಸಚಿವರು ಮತ್ತು ಅಧಿಕಾರಿಗಳನ್ನು ಹಿಂದಕ್ಕೆ ಮರಳಲು ಸೂಚಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ನಾಳೆ ಶಾಲೆಗಳು ಪುನರಾರಂಭಗೊಳ್ಳಲಿವೆ ಎಂದು ತಿಳಿಸಿದ್ದಾರೆ.
ವಾಯು ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಗುಜರಾತ್‌ನಿಂದ ಒಮನ್ ಕಡೆ ಚಲಿಸುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
‘ವಾಯು’ ಚಂಡಮಾರುತ ದಿಕ್ಕು ಬದಲಿಸಿದ್ದು, ಗುಜರಾತ್‌ಗೆ ಅಪ್ಪಳಿಸುವುದಿಲ್ಲ. ಭಗವಂತನ ಕೃಪೆಯಿಂದಾಗಿ ರಾಜ್ಯ ಅಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದೆ. 10 ಪ್ರದೇಶಗಳಿಗೆ ಪರಿಸ್ಥಿತಿ ನಿರ್ವಹಿಸಲು ಕಳುಹಿಸಿದ್ದ ಅಧಿಕಾರಿಗಳು ಮತ್ತು ಸಚಿವರನ್ನು ಹಿಂದಕ್ಕೆ ಕರೆಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಸ್ಥಳಾಂತರ ಗೊಂಡಿದ್ದ ಜನರು ತಮ್ಮ ನಿವಾಸಗಳಿಗೆ ಮರಳಬಹುದು. ಅವರಿಗೆ ಅಗತ್ಯವಿರುವ ಹಣಕಾಸಿನ ನೆರವನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.