ಅಹಮದಾಬಾದ್: ಅರಬಿ ಸಮುದ್ರದಲ್ಲಿ ಎದ್ದಿರುವ ಚಂಡಮಾರುತವು ಗುರುವಾರ ಮುಂಜಾನೆ ಗುಜರಾತ್ ತೀರವನ್ನು ಅಪ್ಪಳಿಸುವ ನಿರೀಕ್ಷೆ ಇದ್ದು, ಸುರಕ್ಷತಾ ಕ್ರಮವಾಗಿ ಕರಾವಳಿ ಸಮೀಪದ ಹತ್ತು ಜಿಲ್ಲೆಗಳ 2.15 ಲಕ್ಷ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ, ಕರಾವಳಿ ಪ್ರದೇಶದಲ್ಲಿರುವ ಬಂದರು ಹಾಗೂ ವಿಮಾನ ನಿಲ್ದಾಣಗಳ ಎಲ್ಲಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಚಂಡಮಾರುತ ದುರ್ಬಲಗೊಳ್ಳುವವರೆಗೂ ಸೌರಾಷ್ಟ್ರ ಪ್ರದೇಶದ ಎಲ್ಲಾ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ವಿಜಯ್ ರೂಪಾಣಿ ತಿಳಿಸಿದ್ದಾರೆ.
ಕರಾವಳಿ ಪ್ರದೇಶದ ಕೆಲವು ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ರೈಲು ಸಂಚಾರ ರದ್ದುಗೊಳಿಸಿದ್ದರೆ, ಇನ್ನೂ ಕೆಲವು ಮಾರ್ಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ.
ಕಛ್, ಮೋರ್‌ಬಿ, ಜಾಮ್‌ನಗರ, ಜುನಾಗಡ, ದೇವಭೂಮಿ–ದ್ವಾರಕಾ, ಪೋರ್‌ಬಂದರ್, ರಾಜ್‌ಕೋಟ್, ಅಮ
ರೇಲಿ, ಭಾವನಗರ ಮತ್ತು ಗಿರ್–ಸೋಮನಾಥ್ ಜಿಲ್ಲೆಗಳಲ್ಲಿ ಚಂಡಮಾರುತರ ಪ್ರಭಾವ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಸನ್ನದ್ಧ ಸ್ಥಿತಿಯಲ್ಲಿ ಸೇನೆ: ಚಂಡಮಾರುತದ ಸಂದರ್ಭದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳಿಗಾಗಿ ಕರಾವಳಿ ಪ್ರದೇಶದಲ್ಲಿ ಸೇನೆ, ವಾಯುಪಡೆ ಹಾಗೂ ಎನ್‌ಡಿಆರ್‌ಎಫ್ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಭಾರತೀಯ ಕರಾವಳಿ ರಕ್ಷಣಾ ಪಡೆಯು ಹಡಗು ಹಾಗೂ ಲಘು ವಿಮಾನಗಳನ್ನು ಸನ್ನದ್ಧವಾಗಿಟ್ಟಿದೆ.
ತಲಾ 70 ಮಂದಿಯನ್ನು ಒಳಗೊಂಡ ಸೇನೆಯ ಹತ್ತು ತುಕಡಿಗಳು ಬೇರೆಬೇರೆ ಪ್ರದೇಶಗಳಲ್ಲಿ ಬೀಡುಬಿಟ್ಟಿವೆ. 24 ತುಕಡಿಗಳು ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಸೇನೆಯ ಪ್ರಕಟಣೆ ತಿಳಿಸಿದೆ. ಭಾರತೀಯ ವಾಯು ಪಡೆಯು ಹೆಲಿಕಾಪ್ಟರ್‌ಗಳನ್ನು ಸಿದ್ಧವಾಗಿಟ್ಟುಕೊಂಡಿದೆ.
ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವವರಿಗೆ ನೆರವು ಒದಗಿಸಲು ಅನುಕೂಲವಾಗುವಂತೆ ಸಮೀಪದ ರೈಲ್ವೆ ನಿಲ್ದಾಣದಲ್ಲಿ ಒಂದು ರೈಲನ್ನು ಸಿದ್ಧವಾಗಿಡಲಾಗುವುದು. ತುರ್ತು ಸಂದರ್ಭದಲ್ಲಿ ಇದನ್ನು ಬಳಸಲಾಗುವುದು ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.
ತೀವ್ರ ಸ್ವರೂಪ
ಅರಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತ ಈಗ ತೀವ್ರ ಸ್ವರೂಪದ ಚಂಡಮಾರುತವಾಗಿ ಪರಿವರ್ತನೆಯಾಗಿದೆ.
ಇದು ಗುರುವಾರ ಬೆಳಿಗ್ಗೆ ವೆರಾವಲ್ ಕರಾವಳಿಯನ್ನು ಅಪ್ಪಳಿಸುವ ನಿರೀಕ್ಷೆ ಇದ್ದು ಆ ಸಂದರ್ಭದಲ್ಲಿ ಗಂಟೆಗೆ 155 ರಿಂದ 165 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.
ಚಂಡಮಾರುತದ ಮುನ್ಸೂಚನೆ ಎಂಬಂತೆ ಬುಧವಾರ ಗುಜರಾತ್ ಕರಾವಳಿಯಲ್ಲಿ ಬಲವಾದ ಗಾಳಿ ಬೀಸಲು ಆರಂಭವಾಗಿದೆ. ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಸಹ ಕಾಣಿಸಿವೆ.
ಸಲಹೆ ಪಾಲಿಸಿ: ಪ್ರಧಾನಿ ಮೋದಿ
‘ವಾಯು’ ಚಂಡಮಾರುತದ ಬಗ್ಗೆ ಸ್ಥಳೀಯ ಸಂಸ್ಥೆಗಳು ಕ್ಷಣಕ್ಷಣದ ಮಾಹಿತಿಯನ್ನು ಜನರಿಗೆ ನೀಡಲಿದ್ದು, ಸಂಸ್ಥೆಗಳು ನೀಡುವ ಸಲಹೆಗಳನ್ನು ಪಾಲಿಸುವ ಮೂಲಕ ತಮ್ಮನ್ನು ಅಪಾಯದಿಂದ ರಕ್ಷಿಸಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಜನರಿಗೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ‘ಚಂಡಮಾರುತಕ್ಕೆ ಒಳಗಾಗಲಿರುವ ಪ್ರದೇಶದ ಜನರ ಸುರಕ್ಷತೆಯ ಬಗ್ಗೆ ಪ್ರಾರ್ಥನೆ ಮಾಡುತ್ತೇನೆ. ತಮ್ಮ ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳು ನೀಡುವ ಸಲಹೆಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.