ADVERTISEMENT

ಕೋಟಿ ಜನರ ಕಾಡಿದ ‘ಯಸ್‌’: ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಅಬ್ಬರ

ಪಿಟಿಐ
Published 26 ಮೇ 2021, 21:45 IST
Last Updated 26 ಮೇ 2021, 21:45 IST
ಚಂಡಮಾರುತದ ಕಾರಣ ಸುರಿದ ಭಾರಿ ಮಳೆಯಿಂದಾಗಿ ಕೋಲ್ಕತ್ತದ ಬೀದಿಗಳು ಬುಧವಾರ ಜಲಾವೃತಗೊಂಡಿದ್ದವು-– ಪಿಟಿಐ ಚಿತ್ರ
ಚಂಡಮಾರುತದ ಕಾರಣ ಸುರಿದ ಭಾರಿ ಮಳೆಯಿಂದಾಗಿ ಕೋಲ್ಕತ್ತದ ಬೀದಿಗಳು ಬುಧವಾರ ಜಲಾವೃತಗೊಂಡಿದ್ದವು-– ಪಿಟಿಐ ಚಿತ್ರ   

ಬಾಲಸೋರ್‌/ಕೋಲ್ಕತ್ತ/ರಾಂಚಿ: ಗಂಟೆಗೆ 130ರಿಂದ 145 ಕಿ.ಮೀ. ವೇಗದ ಗಾಳಿಯೊಂದಿಗೆ ಒಡಿಶಾ ಕರಾವಳಿಗೆ ಬುಧವಾರ ಬೆಳಿಗ್ಗೆ ಅಪ್ಪಳಿಸಿದ ‘ಯಸ್‌’ ಚಂಡಮಾರುತವು, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಅಪಾರ ಹಾನಿಗೆ ಕಾರಣವಾಗಿದೆ. ಎರಡೂ ರಾಜ್ಯಗಳಲ್ಲಿ ಭಾರಿ ಮಳೆ ಸುರಿದಿದೆ. ಮನೆಗಳು ಮತ್ತು ಹೊಲಗಳು ಹಾನಿಯಾಗಿವೆ. ಒಡಿಶಾದಲ್ಲಿ ಮೂವರು ಮತ್ತು ಪಶ್ಚಿಮ ಬಂಗಾಳದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಒಂದು ಕೋಟಿಗೂ ಹೆಚ್ಚು ಜನರು ತೊಂದರೆಗೆ ಒಳಗಾಗಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಒಡಿಶಾದ ಧಾಮ್ರ ಬಂದರು ಸಮೀಪ ಚಂಡಮಾರುತವು ಬುಧವಾರ ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಭೂ ಪ್ರವೇಶ ನಡೆಸಿತು. ಆ ಹೊತ್ತಿಗೆ ವಿಸ್ತಾರವಾದ ಕರಾವಳಿ ಪ್ರವೇಶದಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ತಗ್ಗು ಪ್ರದೇಶಗಳಲ್ಲಿ ಏರುತ್ತಲೇ ಇದ್ದ ನೀರಿನ ಮಟ್ಟವು ಮಣ್ಣು ಮತ್ತು ಹುಲ್ಲಿನ ಚಾವಣಿಯ ಹಲವು ಮನೆಗಳನ್ನು ನೆಲಕ್ಕೆ ಉರುಳಿಸಿದೆ.

ADVERTISEMENT

ಚಂಡಮಾರುತದ ಬಗೆಗಿನ ಮುನ್ಸೂಚನೆಯಿಂದಾಗಿ 20 ಲಕ್ಷಕ್ಕೂ ಹೆಚ್ಚು ಜನರನ್ನು ಮಂಗಳವಾರ ರಾತ್ರಿಯೊಳಗೇ ಸ್ಥಳಾಂತರಿಸಲಾಗಿತ್ತು. ಕೋವಿಡ್‌ ಸಾಂಕ್ರಾಮಿಕದಿಂದಾಗಿ ಜನರನ್ನು ಒಂದೇ ಕಡೆ ಇರಿಸುವುದು ಕೂಡ ದೊಡ್ಡ ಸವಾಲೇ ಆಗಿದೆ.

ಬುಧವಾರ ಸಂಜೆಯ ಹೊತ್ತಿಗೆ ಚಂಡಮಾರುತದ ವೇಗವು ಅಲ್ಪ ಕುಂದಿದೆ. ಆದರೆ, ಅದಕ್ಕೂ ಮೊದಲಿನ ಅವಧಿಯಲ್ಲಿ ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ತತ್ತರಿಸುವಂತೆ ಮಾಡಿತ್ತು. ಈಗ ಮಾರುತವು ಜಾರ್ಖಂಡ್‌ನತ್ತ ಮುಖ ಮಾಡಿದೆ.

ಒಂದು ವಾರದಲ್ಲಿ ಭಾರತಕ್ಕೆ ಅಪ್ಪಳಿಸಿದ ಎರಡನೇ ಚಂಡಮಾರುತ ಇದು. ತೌತೆ ಚಂಡಮಾರುತವು ಪಶ್ಚಿಮ ಕರಾವಳಿಗೆ ಕಳೆದ ವಾರ ಅಪ್ಪಳಿಸಿತ್ತು. ಮಹಾರಾಷ್ಟ್ರ, ಗುಜರಾತ್‌ ಸೇರಿ ಐದು ರಾಜ್ಯಗಳಲ್ಲಿ ಭಾರಿ ನಾಶಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.