ADVERTISEMENT

ಕಡಲ ಮೇಲೆ ಪೂರ್ಣ ಚಂದ್ರನ ಪ್ರಭಾವ, 'ಯಸ್' ಆರ್ಭಟ; ಪಶ್ಚಿಮ ಬಂಗಾಳಕ್ಕೆ ಸಂಕಷ್ಟ

ಏಜೆನ್ಸೀಸ್
Published 26 ಮೇ 2021, 3:23 IST
Last Updated 26 ಮೇ 2021, 3:23 IST
ಪಶ್ಚಿಮ ಬಂಗಾಳದ ಕರಾವಳಿಯಲ್ಲಿ ಅಲೆಗಳ ಆರ್ಭಟ ಜೋರಾಗಿರುವುದು
ಪಶ್ಚಿಮ ಬಂಗಾಳದ ಕರಾವಳಿಯಲ್ಲಿ ಅಲೆಗಳ ಆರ್ಭಟ ಜೋರಾಗಿರುವುದು   

ಕೋಲ್ಕತ್ತ: ಹುಣ್ಣಿಮೆಯ ಈ ದಿನ ಸಂಪೂರ್ಣ ಚಂದ್ರ ಗ್ರಹಣ ಮತ್ತು ಚಂದ್ರ ಭೂಮಿಯ ಸಮೀಪಕ್ಕೆ ಬರುವುದರಿಂದ ಕೆಂಪು ಬಣ್ಣದ ಚಂದ್ರ ಗೋಚರಿಸಲಿದೆ. ಪೂರ್ವ ಕರಾವಳಿಯ ಕೆಲ ಭಾಗಗಳಲ್ಲಿ ಭಾಗಶಃ ಚಂದ್ರ ಗ್ರಹಣ ಕಾಣಬಹುದಾಗಿದೆ. ಹುಣ್ಣಿಮೆಯಿಂದಾಗಿ ಕಡಲ ಅಲೆಗಳ ಆರ್ಭಟವು ಜೋರಾಗಲಿದೆ, ಇದರೊಂದಿಗೆ 'ಯಸ್‌' ಚಂಡಮಾರುತದ ಅಪ್ಪಳಿಸುವಿಕೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ತೀವ್ರ ಪರಿಣಾಮ ಉಂಟು ಮಾಡಬಹುದಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಯಸ್‌’ ಚಂಡಮಾರುತದಿಂದ ಬುಧವಾರ ಪೂರ್ವ ಕರಾವಳಿಯ ಪೂರ್ವ ಮೇದಿನಿಪುರ ಮತ್ತು ದಕ್ಷಿಣ ಪರಗಣದಲ್ಲಿ ಹಾನಿಯ ಪ್ರಮಾಣ ಹೆಚ್ಚಾಗಬಹುದು ಎಂದು ಕೋಲ್ಕತ್ತದಲ್ಲಿ ಹವಾಮಾನ ಇಲಾಖೆಯ ಉಪ ನಿರ್ದೇಶಕ ಸಂಜಿಬ್‌ ಬ್ಯಾನರ್ಜಿ ಹೇಳಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಹುಣ್ಣಿಮೆ ದಿನದಂದು ಕಡಲಲ್ಲಿ ನೀರಿನ ಮಟ್ಟವು ಕನಿಷ್ಠ ಒಂದು ಮೀಟರ್‌ನಷ್ಟು ಏರಿಕೆಯಾಗುತ್ತದೆ, ಇದರಿಂದ ಅಲೆಗಳ ಆರ್ಭಟವು ಮತ್ತಷ್ಟು ಹೆಚ್ಚಾಗುತ್ತದೆ. ಅದರಲ್ಲಿಯೂ ಚಂದ್ರ ಭೂಮಿಗೆ ಸಮೀಪದಲ್ಲಿರುವಾಗ ಸಮುದ್ರದಲ್ಲಿ ನೀರಿನ ಮಟ್ಟ ಗರಿಷ್ಠ ಮಟ್ಟದಲ್ಲಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ADVERTISEMENT

ಇದೇ ಸಮಯದಲ್ಲಿ ಚಂಡಮಾರುತವು ಅಪ್ಪಳಿಸುತ್ತಿರುವುದರಿಂದ ಪೂರ್ವ ಮೇದಿನಿಪುರದಲ್ಲಿ ಅಲೆಗಳ ಆರ್ಭಟ 2ರಿಂದ 4 ಮೀಟರ್‌ಗಳ ವರೆಗೂ ಇರಲಿದ್ದು, ಈಗಾಗಲೇ ಹವಾಮಾನ ಇಲಾಖೆ 'ರೆಡ್‌ ಅಲರ್ಟ್‌' ಘೋಷಿಸಿದೆ.

'ಸಮುದ್ರ ಮತ್ತು ನದಿಗಳ ನೀರು ಕರಾವಳಿಯ ಕೆಲವು ಭಾಗಗಳಿಗೆ ನುಗ್ಗಿದೆ. ಸುಮಾರು ಒಂಬತ್ತು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರ ಸುಮಾರು 3 ಲಕ್ಷ ಜನ ಸರ್ಕಾರಿ ನೌಕರರನ್ನು ವಿಪತ್ತು ನಿರ್ವಹಣಾ ಕಾರ್ಯಗಳಿಗೆ ನಿಯೋಜಿಸಿದೆ. ಭಾರತೀಯ ಸೇನೆಯು ಎಲ್ಲಾ ರೀತಿಯ ಸಂದರ್ಭಗಳನ್ನು ಎದುರಿಸಲು ಸನ್ನದ್ಧವಾಗಿರುವ 17 ತುಕಡಿಗಳನ್ನು ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಿದೆ. ಯಸ್‌ ಪರಿಣಾಮ ಎದುರಿಸುವ ನಿಟ್ಟಿನಲ್ಲಿ ಎನ್‌ಡಿಆರ್‌ಎಫ್‌ನ 52 ತಂಡಗಳನ್ನು ಒಡಿಶಾಕ್ಕೆ ಹಾಗೂ 45 ತಂಡಗಳನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿದೆ.

ಚಂದ್ರ ಗ್ರಹಣ ಎಲ್ಲೆಲ್ಲಿ ಕಾಣಬಹುದು?

ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಹಾಗೂ ಒಡಿಶಾದ ಕರಾವಳಿ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಪ್ರದೇಶಗಳಲ್ಲಿ ಭಾಗಶಃ ಚಂದ್ರ ಗ್ರಹಣ ಗೋಚರಿಸಲಿದೆ. ಮಧ್ಯಾಹ್ನ 3:15ರಿಂದ ಸಂಜೆ 6:23ರ ವರೆಗೂ ಚಂದ್ರ ಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಮುಂದಿನ ಚಂದ್ರ ಗ್ರಹಣ ನವೆಂಬರ್‌ 19ರಂದು ಗೋಚರಿಸಲಿದೆ.

ಇಂದು ಆಸ್ಟ್ರೇಲಿಯಾ, ಜಪಾನ್‌, ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ‘ಸೂಪರ್‌ಮೂನ್‌’ ದರ್ಶನವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.