ಕೋಲ್ಕತ್ತ: ಹಿಂದೂ ಮಹಾಸಾಗರದಲ್ಲಿ ಸೃಷ್ಟಿಯಾಗಿರುವ ‘ಯಸ್’ ಚಂಡಮಾರುತವು ಬುಧವಾರ (ಮೇ 26) ಮಧ್ಯಾಹ್ನದ ವೇಳೆಗೆ ಉತ್ತರ ಒಡಿಶಾದ ಬಾಲಾಸೋರ್‌ನಲ್ಲಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಗಾಳಿಯ ವೇಗವು ಗಂಟೆಗೆ 155ರಿಂದ 165 ಕಿ.ಮೀ.ನಷ್ಟಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.
ಚಂಡಮಾರುತವು ಒಡಿಶಾದ ಪಾರಾದೀಪ್ ಹಾಗೂ ಪಶ್ಚಿಮ ಬಂಗಾಳದ ಸಾಗರ ದ್ವೀಪವನ್ನು ದಾಟಿ ಹೋಗಲಿದೆ. ಪಶ್ಚಿಮ ಬಂಗಾಳದ ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲೂ ಗಂಟೆಗೆ 90ರಿಂದ 100 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಕೋಲ್ಕತ್ತ ಪ್ರಾದೇಶಿಕ ಹವಾಮಾನ ಕೇಂದ್ರದ ಉಪನಿರ್ದೇಶಕ ಸಂಜೀವ್ ಬಂದೋಪಾಧ್ಯಾಯ ತಿಳಿಸಿದ್ದಾರೆ.
ಬಂದರು ಸ್ಥಗಿತ: ಕೋಲ್ಕತ್ತ ಬಂದರಿನಲ್ಲಿ ಮಂಗಳವಾರದಿಂದಲೇ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುವುದು. ಮಂಗಳವಾರ ಬೆಳಿಗ್ಗೆಯಿಂದ ಹಡಗುಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಮಧ್ಯಾಹ್ನ 2 ಗಂಟೆಯಿಂದ ಸರಕು ನಿರ್ವಹಣೆಯನ್ನು ಸ್ಥಗಿತಗೊಳಿಸಲಾಗುವುದು. ಕಾರ್ಮಿಕರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗುವುದು ಎಂದು ಕೋಲ್ಕತ್ತ ಪೋರ್ಟ್ ಟ್ರಸ್ಟ್ ಅಧ್ಯಕ್ಷ ವಿನೀತ್ ಕುಮಾರ್ ತಿಳಿಸಿದ್ದಾರೆ.
ಮೀನುಗಾರಿಕೆಗಾಗಿ ಆಳ ಸಮುದ್ರಕ್ಕೆ ಹೋಗಿದ್ದ ಎಲ್ಲಾ 265 ಬೋಟ್‌ಗಳು ಈಗಾಗಲೇ ತೀರಕ್ಕೆ ಮರಳಿವೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ. ಒಡಿಶಾ ಸರ್ಕಾರವು ರಕ್ಷಣೆ ಹಾಗೂ ಪರಿಹಾರ ತಂಡಗಳನ್ನು ಬಾಲಾಸೋರ್ ಜಿಲ್ಲೆಗೆ ಕಳುಹಿಸಿದೆ. ತಗ್ಗು ಪ್ರದೇಶದಲ್ಲಿರುವವರು ಮತ್ತು ಚಂಡಮಾರುತದ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸುವ ಕೆಲಸ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾರ್ಜ್ ದುರಂತ: ಮೃತರ ಸಂಖ್ಯೆ 86ಕ್ಕೆ
ಮುಂಬೈ: ತೌತೆ ಚಂಡಮಾರುತದ ಸಂದರ್ಭದಲ್ಲಿ ಅರಬ್ಬಿ ಸಮುದ್ರದಲ್ಲಿ ಮುಳುಗಿದ ಪಿ305 ಬಾರ್ಜ್ ಮತ್ತು ವರಪ್ರದಾ ಆ್ಯಂಕರ್ ನಿರ್ವಹಣೆ ದೋಣಿಯಿಂದ ನಾಪತ್ತೆಯಾದವರ ಪೈಕಿ 16 ಮಂದಿಯ ಮೃತದೇಹಗಳು ಗುಜರಾತ್ ಮತ್ತು ಮಹಾರಾಷ್ಟ್ರ ಕರಾವಳಿಯಲ್ಲಿ ಭಾನುವಾರದ ಬಳಿಕ ಪತ್ತೆಯಾಗಿವೆ ಎಂದು ನೌಕಾಪಡೆಯು ಸೋಮವಾರ ತಿಳಿಸಿದೆ. ಇದರೊಂದಿಗೆ ನಾಪತ್ತೆಯಾಗಿದ್ದ ಎಲ್ಲ 86 ಮಂದಿಯ ಮೃತದೇಹ ಪತ್ತೆ ಆದಂತಾಗಿದೆ.
ಬಾರ್ಜ್‌ನಲ್ಲಿದ್ದ 261 ಮಂದಿ ಮತ್ತು ವರಪ್ರದಾ ದೋಣಿಯಲ್ಲಿದ್ದ 13 ಮಂದಿ ಇದೇ 17ರಂದು ನಾಪತ್ತೆಯಾಗಿದ್ದರು. ಅವರ ಪೈಕಿ ಬಾರ್ಜ್‌ನಲ್ಲಿದ್ದ 186 ಹಾಗೂ ದೋಣಿಯಲ್ಲಿದ್ದ ಇಬ್ಬರನ್ನು ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಯು ರಕ್ಷಿಸಿತ್ತು.
ವರಪ್ರದಾ ದೋಣಿಯನ್ನು ಐಎನ್‌ಎಸ್ ಮಕರ ನೌಕೆಯು ಸೋಮವಾರ ಪತ್ತೆ ಮಾಡಿದೆ.ಬಾರ್ಜ್ ಮುಳುಗಿದ ಸ್ಥಳದಲ್ಲಿಯೇ ಅದರ ಅವಶೇಷಗಳನ್ನು ನೌಕೆಯು ಶನಿವಾರವೇ ಗುರುತಿಸಿದೆ.
ತಾರತಮ್ಯ: ಮಮತಾ ಆರೋಪ
ಯಸ್ ಚಂಡಮಾರುತ ಎದುರಿಸಲು ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಸಣ್ಣ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ಒಡಿಶಾಗೆ ತಲಾ ₹600 ಕೋಟಿ ಮುಂಗಡ ನೀಡಿದ್ದರೆ, ಪಶ್ಚಿಮ ಬಂಗಾಳಕ್ಕೆ ಕೇವಲ ₹400 ಕೋಟಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ದೊಡ್ಡ ರಾಜ್ಯವಾಗಿದ್ದರೂ ನಾವು ಪದೇಪದೇ ಯಾಕೆ ಸೌಲಭ್ಯಗಳಿಂದ ವಂಚಿತರಾಗುತ್ತೇವೆ? ಎಲ್ಲಾ ಸಹಕಾರವನ್ನು ನೀಡುವುದಾಗಿ ಅಮಿತ್ ಶಾ ಅವರು ಸಭೆಯಲ್ಲಿ ಭರವಸೆ ನೀಡಿದ್ದರು. ಆದರೆ ಮುಂಗಡ ಹಣವನ್ನು ಘೋಷಿಸುವ ಸಂದರ್ಭದಲ್ಲಿ ಬಂಗಾಳಕ್ಕೆ ಕಡಿಮೆ ಹಣ ನೀಡಿದ್ದಾರೆ. ಅಲ್ಲದೆ ವೈಜ್ಞಾನಿಕವಾಗಿಯೇ ಇದನ್ನು ನಿರ್ಧರಿಸಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿದ್ದಾರೆ.
ಅಮಿತ್ ಶಾ ಸಭೆ, ಸಿದ್ಧತೆಗಳ ಪರಿಶೀಲನೆ
ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಮತ್ತು ಅಂಡಮಾನ್ ನಿಕೋಬಾರ್‌ನ ಲೆಫ್ಟಿನೆಂಟ್ ಗವರ್ನರ್ ಜತೆಗೆ ವಿಡಿಯೊ ಸಂವಾದ ನಡೆಸಿ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದ ಕರಾವಳಿಯಲ್ಲಿರುವ ಆಮ್ಲಜನಕ ತಯಾರಿಕಾ ಘಟಕಗಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡುವಂತೆ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ. ಕೋವಿಡ್ ಆಸ್ಪತ್ರೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಅವರು ಮನವಿ ಮಾಡಿದ್ದಾರೆ. ಗೃಹ ಸಚಿವಾಲಯವು 24 ಗಂಟೆಯೂ ಕಾರ್ಯ ನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು ತೆರೆದಿದ್ದು, ಅಗತ್ಯ ನೆರವಿಗಾಗಿ ಈ ಕೇಂದ್ರವನ್ನು ಸಂಪರ್ಕಿಸಲು ಕೋರಿದರು.
ಪೂರ್ವ ಕರಾವಳಿಯ ಬಂದರುಗಳಲ್ಲಿ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಬಂದರು ಮತ್ತು ಜಲಸಾರಿಗೆ ಖಾತೆಯ ರಾಜ್ಯ ಸಚಿವ ಮನ್‌ಸುಖ್ ಮಾಂಡವೀಯ ಪರಿಶೀಲನೆ ನಡೆಸಿದರು. ಪ್ರಾಣ ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಗರಿಷ್ಠ ಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.