ADVERTISEMENT

ಚಂಡಮಾರುತ: ತಮಿಳುನಾಡಿನಲ್ಲಿ ರೈಲುಗಳ ಸಂಚಾರ ರದ್ದು, ಶಾಲೆಗಳಿಗೆ ರಜೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 15:47 IST
Last Updated 2 ಡಿಸೆಂಬರ್ 2023, 15:47 IST
<div class="paragraphs"><p>ಚಂಡಮಾರುತ ಮತ್ತು ಭಾರಿ ಮಳೆ ಎಚ್ಚರಿಕೆ ಕಾರಣ ಮೀನುಗಾರಿಕಾ ಬೋಟ್‌ಗಳನ್ನು ಕಾಸಿಮೇದು ಬಂದರಿನಲ್ಲಿ ಲಂಗರು ಹಾಕಿರುವುದು </p></div>

ಚಂಡಮಾರುತ ಮತ್ತು ಭಾರಿ ಮಳೆ ಎಚ್ಚರಿಕೆ ಕಾರಣ ಮೀನುಗಾರಿಕಾ ಬೋಟ್‌ಗಳನ್ನು ಕಾಸಿಮೇದು ಬಂದರಿನಲ್ಲಿ ಲಂಗರು ಹಾಕಿರುವುದು

   

–ಪಿಟಿಐ ಚಿತ್ರ

ಚೆನ್ನೈ: ಬಂಗಾಳಕೊಲ್ಲಿಯಲ್ಲಿ  ಚಂಡಮಾರುತ ರೂಪುಗೊಂಡಿರುವ ಪರಿಣಾಮ ಹಲವು ಭಾಗಗಳಲ್ಲಿ  ಡಿ.5ರವರೆಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದ  ಬೆನ್ನಲ್ಲೇ, ತಮಿಳುನಾಡು ಚಂಡಮಾರುತ ಎದುರಿಸಲು ಸಜ್ಜಾಗಿದೆ.

ADVERTISEMENT

ಚೆನ್ನೈ, ತಿರುವಲ್ಲೂರು, ಚೆಂಗಲ್‌ಪಟ್ಟು ಮತ್ತು ಕಾಂಚೀಪುರಂ ಜಿಲ್ಲಾಡಳಿತಗಳು ಡಿ.4ರಂದು ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿವೆ. ಬೀಚ್‌ಗಳಿಗೆ ಜನರು ಭೇಟಿ ನೀಡಬಾರದು ಎಂದು ಗ್ರೇಟರ್ ಚೆನ್ನೈ ಪೊಲೀಸರು ಸೂಚಿಸಿದ್ದಾರೆ. ತಿರುವಲ್ಲೂರು ಮತ್ತು ಚೆನ್ನೈ ಜನರು ಡಿ.4 ಮತ್ತು 5ರಂದು ಮನೆಯ ಒಳಗೇ ಇರುವಂತೆ ಐಎಂಡಿ ತಿಳಿಸಿದೆ.

 ಈ ಮಧ್ಯೆ ಚಂಡಮಾರುತ ಭೀತಿಯಿಂದ ಭಾರತೀಯ ರೈಲ್ವೆಯು ಡಿ.3ರಿಂದ 7ರವರೆಗೆ ಸುಮಾರು 144 ರೈಲುಗಳ ಸೇವೆಯನ್ನು ರದ್ದು ಮಾಡಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಡಿ.3ರ ವೇಳೆಗ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಇದು ಡಿ.4ರಂದು ಆಂಧ್ರಪ್ರದೇಶ, ತಮಿಳುನಾಡು ಕರಾವಳಿಗೆ ಅದು ಅಪ್ಪಳಿಸಲಿದೆ. ಇದರ ಪರಿಣಾಮ 16 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಈ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

 ಈ ಚಂಡಮಾರುತಕ್ಕೆ ಮ್ಯಾನ್ಮಾರ್‌ ಸಲಹೆಯಂತೆ ‘ಮಿಚುಂಗ್‌’ ಎಂದು ಹೆಸರಿಡಲಾಗಿದೆ.

‘ಮುಂಜಾಗ್ರತಾ ಕ್ರಮವಾಗಿ ತಗ್ಗು ಪ್ರದೇಶಗಳಲ್ಲಿ ಸುಮಾರು 5000 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಮತ್ತು ತೀವ್ರ ಮಳೆಯಿಂದ ಸಂಕಷ್ಟಕ್ಕೆ ಒಳಗಾಗಬಹುದಾದ ಎಂಟು ಜಿಲ್ಲೆಗಳಿಗೆ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ನ 17 ತಂಡಗಳನ್ನು ರವಾನಿಸಲಾಗಿದೆ’ ಎಂದು ಸರ್ಕಾರ  ಶನಿವಾರ ತಿಳಿಸಿದೆ.

ಕಂದಾಯ ಸಚಿವ ಕೆ.ಕೆ.ಎಸ್‌.ಎಸ್‌.ಆರ್‌ ರಾಮಚಂದ್ರನ್‌, ‘ರಾಜ್ಯ ಮತ್ತು ಜಿಲ್ಲಾ ಮಟ್ಟದ ನಿಯಂತ್ರಣ ಕೊಠಡಿಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿವೆ. ಚೆನ್ನೈನಲ್ಲಿ 162 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ರಸ್ತೆಗಳಿಂದ ನೀರು ಹೊರಹಾಕಲು 504 ಪಂಪ್‌ಗಳನ್ನು ಸಿದ್ಧವಿಟ್ಟುಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

‘ಜನರಿಂದ ಬರುವ ದೂರುಗಳನ್ನು ವಿಳಂಬ ಮಾಡದೆ ಪರಿಹರಿಸಲು ವಿದ್ಯುತ್ ಇಲಾಖೆಯ 15,000 ಸಿಬ್ಬಂದಿ ಸಿದ್ಧವಿದ್ದಾರೆ. ಆಸ್ಪತ್ರೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಎಚ್ಚರವಹಿಸಲು ಸೂಚನೆ ನೀಡಿದ್ದೇವೆ’ ಎಂದು ಹಣಕಾಸು ಮತ್ತು ಇಂಧನ ಸಚಿವ ತಂಗಮ್‌ ತೆನ್ನರಸು ಅವರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.