ADVERTISEMENT

ಸೈರಸ್ ಮಿಸ್ತ್ರಿ ಅಪಘಾತ ಪ್ರಕರಣ: ಡಾ. ಅನಾಹಿತಾ ಪತಿ ಹೇಳಿಕೆ ದಾಖಲು

ಪಿಟಿಐ
Published 4 ನವೆಂಬರ್ 2022, 14:33 IST
Last Updated 4 ನವೆಂಬರ್ 2022, 14:33 IST
ಸೈರಸ್ ಮಿಸ್ತ್ರಿ
ಸೈರಸ್ ಮಿಸ್ತ್ರಿ   

ಮುಂಬೈ: ಉದ್ಯಮಿ ಸೈರಸ್ ಮಿಸ್ತ್ರಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಸಮಯದಲ್ಲಿ ಕಾರು ಚಲಾಯಿಸುತ್ತಿದ್ದ ತನ್ನ ಪತ್ನಿ ಡಾ. ಅನಾಹಿತಾ ಪಾಂಡೋಲೆ ಕಾರನ್ನು ಎರಡನೇ ಲೇನ್‌ಗೆ ವಿಲೀನಗೊಳಿಸಲು ಸಾಧ್ಯವಾಗಲಿಲ್ಲ ಎಂದು ಅನಾಹಿತಾ ಪತಿ ಡೇರಿಯಸ್ ಪಾಂಡೋಲೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಪಾಲ್ಘರ್‌ನ ಕಾಸಾ ಪೊಲೀಸ್ ಠಾಣೆಯ ಅಧಿಕಾರಿಗಳು ಮಂಗಳವಾರ ಡೇರಿಯಸ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

‘ನಮ್ಮ ವಾಹನಕ್ಕಿಂತ ಮಂದಿದ್ದ ಕಾರು ಮೂರನೇ ಲೇನ್‌ನಿಂದ ಎರಡನೇ ಲೇನ್‌ಗೆ ಹೋಯಿತು. ಅನಾಹಿತಾ ಕೂಡಾ ಅದನ್ನು ಅನುಸರಿಸಲು ಪ್ರಯತ್ನಿಸಿದರು. ಆದರೆ, ಎರಡನೇ ಲೇನ್‌ಗೆ ಕೊಂಡೊಯ್ಯುವಾಗ ಬಲಭಾಗದಲ್ಲಿ ಟ್ರಕ್ ಇರುವುದನ್ನು ಗಮನಿಸಿದರು. ಇದರಿಂದಾಗಿ ಎರಡನೇ ಲೇನ್‌ಗೆ ಹೋಗಲು ಸಾಧ್ಯವಾಗದೇ ಕಾರು ಡಿಕ್ಕಿಯಾಯಿತು’ ಎಂದು ಡೇರಿಯಸ್ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

ಸೆ. 4ರಂದು ಸಂಭವಿಸಿದ ಕಾರು ಅಪಘಾತದಲ್ಲಿ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ ಸಾವಿಗೀಡಾಗಿದ್ದರು. ಅಪಘಾತದ ವೇಳೆ ಕಾರು ಚಲಾಯಿಸುತ್ತಿದ್ದ ಡಾ. ಅನಾಹಿತಾ ಮತ್ತು ಅವರ ಪತಿ ಡೇರಿಯಸ್ ಗಂಭೀರವಾಗಿ ಗಾಯಗೊಂಡಿದ್ದರು. ಕಳೆದ ವಾರ ಮುಂಬೈನ ಆಸ್ಪತ್ರೆಯಿಂದ ಡೇರಿಯಸ್ ಬಿಡುಗಡೆ ಆಗಿದ್ದು, ಪೊಲೀಸರ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಅನಾಹಿತಾ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರ ಹೇಳಿಕೆ ಇನ್ನೂ ದಾಖಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.