ADVERTISEMENT

ಸೈರಸ್ ಮಿಸ್ತ್ರಿ ಸಾವು: ಅಪಘಾತಕ್ಕೂ 5 ಸೆಕೆಂಡ್ ಮುನ್ನ ಬ್ರೇಕ್ ಹಾಕಲಾಗಿದೆ– ವರದಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 12:14 IST
Last Updated 9 ಸೆಪ್ಟೆಂಬರ್ 2022, 12:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಉದ್ಯಮಿ ಸೈರಸ್ ಮಿಸ್ತ್ರಿ ಸಾವಿಗೆ ಕಾರಣವಾದ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಐಷಾರಾಮಿ ಕಾರು ಉತ್ಪಾದಕ ಕಂಪನಿ ಮರ್ಸಿಡಿಸ್ ಬೆಂಜ್ ಮಧ್ಯಂತರ ತನಿಖಾ ವರದಿಯನ್ನು ಸಲ್ಲಿಸಿದೆ ಎಂದು ಮಹಾರಾಷ್ಟ್ರದ ಪಾಲ್ಘರ್ ಪೊಲೀಸರು ಹೇಳಿದ್ದಾರೆ.

ಮರ್ಸಿಡಿಸ್ ಬೆಂಜ್ ಕಾರು ಡಿವೈಡರ್‌ಗೆ ಗುದ್ದಿರುವ 5 ಸೆಕೆಂಡ್ ಮುನ್ನ ಬ್ರೇಕ್ ಹಾಕಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿರುವುದಾಗಿ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಮರ್ಸಿಡಿಸ್–ಬೆಂಜ್ ಕಂಪನಿಯ ಹಾಂಗ್‌ಕಾಂಗ್‌ನ ತಜ್ಞರ ತಂಡವು ಕಾರಿನ ಪರಿಶೀಲನೆಗೆ ಸೋಮವಾರ ಮುಂಬೈಗೆ ಭೇಟಿ ನೀಡಲಿದ್ದು, ಅಂತಿಮ ವರದಿ ನೀಡಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಪ್ರಕರಣದ ತನಿಖೆ ಕುರಿತಂತೆ ತನಿಖಾಧಿಕಾರಿಗಳ ಜೊತೆ ಸಹಕರಿಸುತ್ತಿದ್ದು, ಯಾವುದೇ ದೋಷ ಕಂಡುಬಂದರೆ ಅವರ ಜೊತೆ ಮಾತ್ರ ಮಾಹಿತಿ ಹಂಚಿಕೊಳ್ಳುತ್ತೇವೆ. ಗ್ರಾಹಕರ ಖಾಸಗಿತನ ಮತ್ತು ವಿಶ್ವಾಸಾರ್ಹತೆಯನ್ನು ನಾವು ಗೌರವಿಸುತ್ತೇವೆ ಎಂದು ಜರ್ಮನ್ ಮೂಲದ ಕಾರು ಉತ್ಪಾದಕ ಕಂಡನಿ ಮರ್ಸಿಡಿಸ್ ಬೆಂಜ್ ಹೇಳಿದೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಭಾನುವಾರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸೈರಸ್ ಮಿಸ್ತ್ರಿ(54) ಮತ್ತು ಅವರ ಸ್ನೇಹಿತ ಜಹಾಂಗೀರ್ ಪಂಡೊಲೆ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಮತ್ತಿಬ್ಬರಾದ ಅನಾಹಿತಾ ಪಂಡೊಲೆ(55) ಮತ್ತು ಅವರ ಪತಿ ಡಾರಿಯಸ್ ಪಂಡೊಲೆಗೆ(60) ಗಾಯಗಳಾಗಿದ್ದವು.

ಅವರು ಗುಜರಾತ್‌ನಿಂದ ಮುಂಬೈಗೆ ತೆರಳುತ್ತಿದ್ದ ಸಂದರ್ಭ ಸೂರ್ಯ ನದಿ ಸೇತುವೆ ಮೇಲೆ ಈ ಅಪಘಾತ ಸಂಭವಿಸಿತ್ತು.

‘ಮರ್ಸಿಡಿಸ್ ಬೆಂಜ್ ಕಂಪನಿಯು ಅಪಘಾತಕ್ಕೆ ಸಂಬಂಧಿಸಿದಂತೆ ಮಧ್ಯಂತರ ತನಿಖಾ ವರದಿಯನ್ನು ಪೊಲೀಸರಿಗೆ ಸಲ್ಲಿಸಿದೆ. ಕಾರು 100 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಡಿವೈಡರ್‌ಗೆ ಡಿಕ್ಕಿ ಹೊಡೆದಾಗ 89 ಕಿ.ಮೀ ವೇಗದಲ್ಲಿತ್ತು’ ಎಂದು ಪಾಲ್ಘರ್ ಎಸ್‌ಪಿ ಬಾಲಾ ಸಾಹೇಬ್ ಪಾಟೀಲ್ ಹೇಳಿದರು.

ಅಪಘಾತಕ್ಕೂ 5 ಸೆಕೆಂಡ್ ಮುನ್ನ ಕಾರಿನ ಬ್ರೇಕ್ ಹಾಕಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಅವರು ಹೇಳಿದ್ದಾರೆ.

ಪ್ರಾದೇಶಿಕ ಸಾರಿಗೆ ಕಚೇರಿಯೂ ತನ್ನ ವರದಿ ಸಲ್ಲಿಸಿದ್ದು, ಅಪಘಾತ ಸಂದರ್ಭ ಕಾರಿನ ನಾಲ್ಕು ಏರ್‌ಬ್ಯಾಗ್ ತೆರೆದುಕೊಂಡಿದ್ದವು. ಡ್ರೈವರ್ ಸೀಟಿನ ಬಳಿಯಿದ್ದ ಮೂರು, ಅದಕ್ಕೆ ಹೊಂದಿಕೊಂಡಿದ್ದ ಸೀಟಿನ ಒಂದು ಏರ್‌ಬ್ಯಾಗ್ ತೆರೆದುಕೊಂಡಿತ್ತು ಎಂದು ಅದರಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.