ADVERTISEMENT

ದಾಭೋಲ್ಕರ್ ಹತ್ಯೆ: ತನಿಖೆಯ ಸ್ಥಿತಿ ತಿಳಿಸಲು ಸಿಬಿಐಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 15:43 IST
Last Updated 11 ಜನವರಿ 2023, 15:43 IST
ನರೇಂದ್ರ ದಾಭೋಲ್ಕರ್
ನರೇಂದ್ರ ದಾಭೋಲ್ಕರ್   

ಮುಂಬೈ: ವಿಚಾರವಾದಿ ಡಾ.ನರೇಂದ್ರ ದಾಭೋಲ್ಕರ್ ಹತ್ಯೆ ‍‍ಪ್ರಕರಣದ ತನಿಖೆ ಸ್ಥಿತಿಗತಿಯನ್ನು ಜ. 30ರೊಳಗೆ ತಿಳಿಸುವಂತೆ ಬಾಂಬೆ ಹೈಕೋರ್ಟ್ ಬುಧವಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸೂಚಿಸಿದೆ.

ನ್ಯಾಯಮೂರ್ತಿಗಳಾದ ಎ. ಎಸ್. ಗಡ್ಕರಿ ಮತ್ತು ಪಿ. ಡಿ. ನಾಯಕ್ ವಿಭಾಗೀಯ ಪೀಠವು ದಾಭೋಲ್ಕರ್ ಅವರ ಪುತ್ರಿ ಮುಕ್ತಾ ದಾಭೋಲ್ಕರ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದ್ದು, ತನಿಖೆಯ ಮೇಲ್ವಿಚಾರಣೆ ಮುಂದುವರಿಸುವಂತೆ ಕೋರಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಕೇತನ್ ತಿರೋಡ್ಕರ್ ಹಾಗೂ ಮುಕ್ತಾ ದಾಭೋಲ್ಕರ್ ಅವರ ಅರ್ಜಿಯ ನಂತರ 2014 ರಲ್ಲಿ ಹೈಕೋರ್ಟ್ ತನಿಖೆಯನ್ನು ಪುಣೆ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಿತ್ತು. ಅಂದಿನಿಂದ ಹೈಕೋರ್ಟ್ ಪ್ರಕರಣದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.

ADVERTISEMENT

2013ರ ಆ. 20ರಂದು ಪುಣೆಯಲ್ಲಿ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ವಿಚಾರವಾದಿ ದಾಭೋಲ್ಕರ್ (67) ಅವರನ್ನು ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.

ದಾಳಿಕೋರರು ಮೂಲಭೂತವಾದಿ ಹಿಂದೂ ಸಂಘಟನೆಯಾದ ಸನಾತನ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿದೆ.

ದಾಳಿಕೋರರು ತೀವ್ರಗಾಮಿ ಹಿಂದೂ ಸಂಘಟನೆ ಸನಾತನ ಸಂಸ್ಥಾದೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಸಿಬಿಐ ಇದುವರೆಗೆ ಐದು ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.

ಹತ್ಯೆಯ ಮಾಸ್ಟರ್ ಮೈಂಡ್ ಗಳು ದೊಡ್ಡ ಸಂಖ್ಯೆಯಲ್ಲಿರುವುದರಿಂದ ತನ್ನ ತನಿಖೆ ಮುಂದುವರೆದಿದೆ ಎಂದು ಸಿಬಿಐ ಈ ಹಿಂದೆ ಹೇಳಿತ್ತು. ಚಾರ್ಜ್ ಶೀಟ್ ಸಲ್ಲಿಸಿರುವುದರಿಂದ, ಹೈಕೋರ್ಟ್ ತನ್ನ ಮೇಲ್ವಿಚಾರಣೆಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಹೇಳಿತು.

‘ನಿರಂತರ ಮೇಲ್ವಿಚಾರಣೆ ಮಾಡಲು ಸಾಧ್ಯವಿಲ್ಲ. ಆದರೆ, ಚಾರ್ಜ್ ಶೀಟ್ ಸಲ್ಲಿಸಿದಾಗ, ಆರೋಪಿಗಳ ಹಕ್ಕುಗಳನ್ನು ಪರಿಗಣಿಸಬೇಕು ಎಂದು ಕಾನೂನು ಸ್ಪಷ್ಟವಾಗಿದೆ’ ಎಂದು ನ್ಯಾಯಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.