ಪುಣೆ: ವಿಚಾರವಾದಿ ಹಾಗೂ ಮೌಢ್ಯವಿರೋಧಿ ಹೋರಾಟಗಾರ ಡಾ.ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ಐವರು ಆರೋಪಿಗಳ ವಿರುದ್ಧ ಇಲ್ಲಿನ ವಿಶೇಷ ನ್ಯಾಯಾಲಯ ಬುಧವಾರ ದೋಷಾರೋಪಗಳನ್ನು ಹೊರಿಸಿತು.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್.ಆರ್.ನವಂದರ್ ಅವರು ವಿಚಾರಣೆ ನಡೆಸಿದರು. ಆರೋಪಿಗಳ ಪೈಕಿ ವೀರೇಂದ್ರ ಸಿನ್ಹ ತಾವ್ಡೆ, ಸಚಿನ್ ಅಂದೂರೆ ಹಾಗೂ ಶರದ್ ಕಳಸ್ಕರ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸಿದರು. ಆರೋಪಿಗಳಾದ ಶರದ್ ಪುನಾಲೇಕರ್ ಹಾಗೂ ವಿಕ್ರಮ್ ಭಾವೆ ಅವರು ನ್ಯಾಯಾಲಯಕ್ಕೆ ಭೌತಿಕವಾಗಿ ಹಾಜರಾಗಿ, ವಿಚಾರಣೆ ಎದುರಿಸಿದರು.
‘ನಮ್ಮ ವಕೀಲರೊಂದಿಗೆ ಚರ್ಚಿಸಿ, ಪ್ರತಿಕ್ರಿಯೆ ಸಲ್ಲಿಸಲು ಸಮಯಾವಕಾಶ ಅಗತ್ಯ’ ಎಂಬ ಆರೋಪಿಗಳ ಮನವಿಯನ್ನು ನ್ಯಾಯಾಧೀಶ ನವಂದರ್ ತಿರಸ್ಕರಿಸಿದರು.
‘ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಸೆ. 30ರಂದು ನಡೆಯಲಿದೆ’ ಎಂದು ನಂತರ ಸಿಬಿಐ ಪರ ವಕೀಲ ಪ್ರಕಾಶ್ ಸೂರ್ಯವಂಶಿ ತಿಳಿಸಿದರು.
‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’ ಸ್ಥಾಪಿಸಿದ್ದ ದಾಭೋಲ್ಕರ್ ಅವರು, ಮೌಢ್ಯಗಳ ಆಚರಣೆ ವಿರುದ್ಧ ಹೋರಾಟ ನಡೆಸುತ್ತಿದ್ದರು. ಬಲಪಂಥೀಯ ಸಂಘಟನೆ ಸದಸ್ಯರು ದಾಭೋಲ್ಕರ್ ಅವರನ್ನು 2013ರ ಆಗಸ್ಟ್ 20ರಂದು ಗುಂಡಿಕ್ಕಿ ಹತ್ಯೆ ಮಾಡಿದರು ಎಂದು ಆರೋಪಿಸಲಾಗಿದೆ.
ಆರೋಪಿಗಳ ವಿರುದ್ಧ ಯುಎಪಿಎ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ದೋಷಾರೋಪ ಹೊರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.