ನವದೆಹಲಿ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ಆರೋಪಿಗೆ ನೀಡಿದ್ದ ಜಾಮೀನು ಪ್ರಶ್ನಿಸಿ, ದಾಭೋಲ್ಕರ್ ಪುತ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ದ್ವಿಚಕ್ರವಾಹನದಲ್ಲಿ ಬಂದಿದ್ದ ಹಂತಕರು 2013ರ ಆಗಸ್ಟ್ 20ರಂದು ಪುಣೆಯಲ್ಲಿ ದಾಭೋಲ್ಕರ್ ಅವರನ್ನು ಗುಂಡಿಟ್ಟು ಕೊಂದಿದ್ದರು. ಪ್ರಕರಣದ ಐವರು ಆರೋಪಿಗಳಲ್ಲಿ ಒಬ್ಬರಾದ ವಿಕ್ರಮ್ ಭಾವೆ ಅವರಿಗೆ ಬಾಂಬೆ ಹೈಕೋರ್ಟ್ 2021ರ ಮೇ 6 ರಂದು ಜಾಮೀನು ನೀಡಿತ್ತು. ದಾಭೋಲ್ಕರ್ ಪುತ್ರಿ ಮುಕ್ತಾ ದಾಭೋಲ್ಕರ್ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎಸ್.ವಿಎ.ನ್ ಭಟ್ಟಿ ಅವರಿದ್ದ ಪೀಠ, ‘ಪ್ರಕರಣದ ಆರೋಪಿಗೆ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಹೈಕೋರ್ಟ್, ಸ್ಪಷ್ಟ ಕಾರಣಗಳನ್ನು ಹೇಳಿ ಆದೇಶ ನೀಡಿತ್ತು’ ಎಂದು ತಿಳಿಸಿತು.
ಮುಕ್ತಾ ಪರ ಹಾಜರಿದ್ದ ಹಿರಿಯ ವಕೀಲ ಆನಂದ್ ಗ್ರೋವರ್, ‘ಇದು ಗಂಭೀರ ಪ್ರಕರಣ ಆಗಿದ್ದು, ಆರೋಪಿಯು (ವಿಕ್ರಮ್) ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಸಾಕ್ಷಿಯೊಬ್ಬರು ವಿಧಿವಿಜ್ಞಾನ ಪರೀಕ್ಷೆಯ ಸಂದರ್ಭದಲ್ಲಿ ಮಾಹಿತಿ ನೀಡಿದ್ದರು’ ಎಂಬುದನ್ನು ಪೀಠದ ಗಮನಕ್ಕೆ ತಂದರು.
‘ಆ ಹೇಳಿಕೆಯು ತಾಳೆಯಾಗುವುದಿಲ್ಲ ಎಂಬುದನ್ನು ಹೈಕೋರ್ಟ್ ಕಂಡುಕೊಂಡಿದೆ. ಮಾತ್ರವಲ್ಲ, ಆರೋಪಿಯು 2021ರ ಮೇ 6 ರಿಂದಲೂ ಜಾಮೀನಿನ ಮೇಲೆ ಹೊರಗಿದ್ದಾರೆ’ ಎಂದು ಹೇಳಿದ ಪೀಠ ಅರ್ಜಿಯನ್ನು ತಿರಸ್ಕರಿಸಿತು.
ದಾಭೋಲ್ಕರ್ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರು ಸ್ಥಳದಿಂದ ಪರಾರಿಯಾಗಲು ನೆರವಾದ ಆರೋಪ ವಿಕ್ರಮ್ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.