ನವದೆಹಲಿ: ಗೂಢಚಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಪಟ್ಟು ಪಾಕಿಸ್ತಾನದ ಜೈಲಿನಲ್ಲಿ ನಿಧನರಾಗಿದ್ದ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ಶನಿವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಪಂಜಾಬ್‌ನ ಭಿಖಿವಿಂಡ್ ಗ್ರಾಮದಲ್ಲಿ ದಲ್ಬೀರ್ ಕೌರ್ ಅವರ ಅಂತ್ಯಕ್ರಿಯೆ ಇಂದು (ಭಾನುವಾರ) ನಡೆಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದ್ದಾರೆ.
ಭಾರತ -ಪಾಕಿಸ್ತಾನ ಗಡಿಯ ಸಮೀಪವಿರುವ ಪಂಜಾಬ್‌ನ ಭಿಖಿವಿಂಡ್ ಗ್ರಾಮದ ರೈತರಾಗಿದ್ದ ಸರಬ್ಜಿತ್ ಸಿಂಗ್ ಅವರು ತಿಳಿಯದೆ ಪಾಕ್ ಗಡಿ ಪ್ರವೇಶಿಸಿದ್ದರು. ಕೂಡಲೇ ಅವರನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದರು. ಪ್ರಕರಣ ಕುರಿತು ವಿಚಾರಣೆ ನಡೆಸಿದ ಪಾಕ್‌ನ ಲಾಹೋರ್ ನ್ಯಾಯಾಲಯ 1991ರಲ್ಲಿ ಸರಬ್ಜಿತ್ ಸಿಂಗ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.
22 ವರ್ಷಗಳ ಕಾಲ ಸುದೀರ್ಘ ಜೈಲುವಾಸ ಅನುಭವಿಸಿದ್ದ ಸರಬ್ಜಿತ್ ಸಿಂಗ್ ಮೇಲೆ 2013ರಲ್ಲಿ ಜೈಲಿನ ಕೈದಿಗಳು ಹಲ್ಲೆ ನಡೆಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.
ಸರಬ್ಜಿತ್ ಸಿಂಗ್‌ರನ್ನು ಭಾರತಕ್ಕೆ ಕರೆತರಲು ದಲ್ಬೀರ್ ಕೌರ್ ಕಾನೂನು ಹೋರಾಟ ನಡೆಸಿದ್ದರು.
‘ಸರಬ್ಜಿತ್ ಸಿಂಗ್ ಅವರ ಬಿಡುಗಡೆಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲಗೊಂಡಿದೆ’ ಎಂದು ಕೌರ್ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಸಹೋದರನ ಬಿಡುಗಡೆಗಾಗಿ ಹಲವು ಬಾರಿ ಪತ್ರ ಬರೆದಿದ್ದರೂ ಕೂಡ ವಿದೇಶಾಂಗ ವ್ಯವಹಾರ ಸಚಿವಾಲಯವಾಗಲಿ, ಗೃಹ ಸಚಿವಾಲಯವಾಗಲಿ ಯಾವುದೇ ಉತ್ತರ ನೀಡಲಿಲ್ಲ’ ಎಂದು ಕೌರ್ ತಿಳಿಸಿದ್ದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸರಬ್ಜಿತ್ ಬಿಡುಗಡೆಗೆ ಮೊದಲ ಭಾರಿಗೆ ಪ್ರಯತ್ನಿಸಿದರು. ನಂತರ ಮನಮೋಹನ್‌ಸಿಂಗ್ ಆ ಪ್ರಯತ್ನವನ್ನು ಮುಂದುವರೆಸಿದರಾದರೂ ಪ್ರಮಾಣಿಕವಾಗಿ ಕೆಲಸಮಾಡಲಿಲ್ಲ ಎಂಬುದೇ ನಮ್ಮ ಭಾವನೆ ಎಂದು ದಲ್ಬೀರ್ ಕೌರ್ ವಿಷಾದ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.