ADVERTISEMENT

ಕೋಟಾ | ದಲಿತ ಬಾಲಕನ ಬೆತ್ತಲೆಗೊಳಿಸಿ, ನೃತ್ಯ ಮಾಡುವಂತೆ ಒತ್ತಾಯ: ಪ್ರಕರಣ ದಾಖಲು

ಪಿಟಿಐ
Published 14 ಸೆಪ್ಟೆಂಬರ್ 2024, 14:34 IST
Last Updated 14 ಸೆಪ್ಟೆಂಬರ್ 2024, 14:34 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೋಟಾ: ತಮ್ಮ ಮ್ಯೂಸಿಕ್‌ ಸಿಸ್ಟಂನ ವೈರ್‌ ಕದ್ದಿದ್ದಾನೆ ಎಂದು ಆರೋಪಿಸಿ ಆರು ಮಂದಿ ಸೇರಿ 12 ವರ್ಷದ ದಲಿತ ಬಾಲಕನ್ನು ಬೆತ್ತಲೆಗೊಳಿಸಿ, ಹಾಡೊಂದಕ್ಕೆ ನಗುತ್ತಾ ನೃತ್ಯ ಮಾಡಬೇಕೆಂದು ಬಲವಂತ ಮಾಡಿ, ನೃತ್ಯದ ದೃಶ್ಯಗಳನ್ನು ವಿಡಿಯೊ ಮಾಡಿಕೊಂಡಿರುವ ಘಟನೆ ಇಲ್ಲಿ ನಡೆದಿದೆ.

ಘಟನೆ ಬಗ್ಗೆ ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ. ‘ಸಂಗೀತ ತಂಡವೊಂದರ ಆರು ಮಂದಿ ಈ ಕೃತ್ಯ ನಡೆಸಿದ್ದು, ಇವರನ್ನು ಬಂಧಿಸಲಾಗಿದೆ. ಇವರ ಮೇಲೆ ಪೋಕ್ಸೊ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆ, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ಬಾಲಕ ನೃತ್ಯ ಮಾಡುತ್ತಿರುವಾಗ ಆರು ಮಂದಿ, ಆತನ ಮುಂದೆ ಕುಳಿತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ. ಪೊಲೀಸರ ಕೈಗೂ ಈ ವಿಡಿಯೊ ತಲುಪಿದೆ. ಈ ಬಳಿಕ, ಸಂತ್ರಸ್ತ ಬಾಲಕನ್ನು ಪತ್ತೆ ಹಚ್ಚಿದ ಪೊಲೀಸರು, ಅವರ ತಂದೆ ದೂರು ನೀಡುವಂತೆ ಮಾಡಿದ್ದಾರೆ.

ದೂರಿನಲ್ಲೇನಿದೆ?:

‘ಜಿಎಡಿ ವೃತ್ತದಲ್ಲಿ ಜಾತ್ರೆ ನಡೆಯುತ್ತಿತ್ತು. ಜಾತ್ರೆಯಲ್ಲಿ ಶುಕ್ರವಾರ ರಾತ್ರಿ ಹಾಸ್ಯ ಕಾರ್ಯಕ್ರಮವೊಂದು ಜರುಗಿತ್ತು. ಈ ಕಾರ್ಯಕ್ರಮ ವೀಕ್ಷಿಸಲು ಮಗ ತೆರಳಿದ್ದ. ರಾತ್ರಿ 1 ಗಂಟೆಯಿಂದ 4 ಗಂಟೆಯವರೆಗೆ ನಾಲ್ಕು–ಐದು ಜನರು ನನ್ನ ಮಗನನ್ನು ಸುತ್ತುವರಿದಿದ್ದಾರೆ. ನನ್ನ ಮಗ ವೈರ್‌ ಕದ್ದಿದ್ದಾನೆ ಎಂದು ಅವರು ಆರೋಪಿಸಿದ್ದಾರೆ’ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಬಂಧಿತರು ಯಾರು?:

ತಂದೆ–ಮಗನಾದ ಆಶಿಷ್‌ ಉಪಾಧ್ಯಾಯ ಅಲಿಯಾಸ್‌ ವಿಕ್ಕು (52) ಹಾಗೂ ಯಯಾತಿ ಉಪಾಧ್ಯಾಯ ಅಲಿಯಾಸ್‌ ಗುನ್‌ಗುನ್‌ (24), ಕ್ಷಿತಿಜ್‌ ಗುರ್ಜರ್‌ ಅಲಿಯಾಸ್‌ ಬಿಟ್ಟೂ (24), ಸಂದೀಪ್‌ ಸಿಂಗ್‌ (30), ಸುಮಿತ್‌ ಕುಮಾರ್‌ ಸೇನ್‌ (25) ಹಾಗೂ ಗೌರವ್‌ ಸೋನಿ (21)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.