ADVERTISEMENT

ಮಧ್ಯ ಪ್ರದೇಶದಲ್ಲಿ ಜಾತಿ ತಾರತಮ್ಯ: ದಲಿತರನ್ನು ಮುಟ್ಟಿದರೆ ಕೈ ತೊಳೆಯುತ್ತಾರೆ ಜನ!

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 7:39 IST
Last Updated 27 ಸೆಪ್ಟೆಂಬರ್ 2019, 7:39 IST
ಮನೋಜ್ ವಾಲ್ಮೀಕಿ
ಮನೋಜ್ ವಾಲ್ಮೀಕಿ   

ಶಿವಪುರಿ: ಬಯಲಲ್ಲಿ ಶೌಚ ಮಾಡಿದ್ದಕ್ಕಾಗಿ ಇಬ್ಬರು ದಲಿತ ಮಕ್ಕಳನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಯಾದವ್ ಸಮುದಾಯಕ್ಕೆ ಸೇರಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಒಬಿಸಿ ವಿಭಾಗಕ್ಕೆಸೇರಿದ ಸಹೋದರರಿಬ್ಬರು ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಬಯಲು ಶೌಚ ಮಾಡಿದ ದಲಿತ ಮಕ್ಕಳನ್ನು ಬುಧವಾರ ಹೊಡೆದು ಸಾಯಿಸಿದ್ದರು.

ಮಕ್ಕಳ ಅಂತ್ಯ ಸಂಸ್ಕಾರ ಭಾವ್‌ಖೆಡಿಯಲ್ಲಿ ನಡೆದಿದ್ದು ಅಲ್ಲಿನ ಒಬಿಸಿ ಸಮುದಾಯಕ್ಕೆ ಸೇರಿದ ಕುಟುಂಬಗಳು ಇದರಲ್ಲಿ ಭಾಗಿಯಾಗಿಲ್ಲ. ಮಕ್ಕಳ ಅಂತ್ಯ ಸಂಸ್ಕಾರವನ್ನು ಸುಮಾರು 200 ಮೀಟರ್ ದೂರದಲ್ಲಿ ನಿಂತು ವೀಕ್ಷಿಸಿದ ಒಬಿಸಿ ಕುಟುಂಬಗಳು ನಾವು ಇದರಲ್ಲಿಭಾಗಿಯಾಗಲ್ಲ. ಇದೊಂದು ಸಂಪ್ರದಾಯ ಎಂದಿದ್ದಾರೆ.

ಎಫ್‌ಐಆರ್ ಪ್ರಕಾರ ಹಕಮ್ ಯಾದವ್ ಮತ್ತ ರಾಮೇಶ್ವರ್ ಯಾದವ್ 10ರ ಹರೆಯದ ಅವಿನಾಶ್ ಮತ್ತು 12ರ ಹರೆಯದ ರೋಶಿನಿಯನ್ನು ಹೊಡೆದು ಸಾಯಿಸಿದ್ದರು. ಈಆರೋಪಿಗಳನ್ನು ಬಂಧಿಸಲಾಗಿದೆ,
ಆರೋಪಿಗಳಲ್ಲಿ ಒಬ್ಬ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆದಾಗ್ಯೂ ಈ ಗ್ರಾಮದಲ್ಲಿ ಜಾತಿ ತಾರತಮ್ಯ, ಅಸ್ಪೃಶ್ಯತೆ ಈಗಲೂ ಇದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ದಲಿತರ ಅಂತ್ಯ ಸಂಸ್ಕಾರ ಕಾರ್ಯಗಳಲ್ಲಿ ಇತರ ಜಾತಿಯವರು ಭಾಗವಹಿಸುವುದಿಲ್ಲ. ದಲಿತರನ್ನು ಮುಟ್ಟಿದರೆ ಕೈ ತೊಳೆಯುತ್ತಾರೆ. ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿ ಎಸ್‌ಸಿ ಮತ್ತು ಒಬಿಸಿ ವಿದ್ಯಾರ್ಥಿಗಳ ಹೆಸರನ್ನು ಕರಿಹಲಗೆಯಲ್ಲಿ ಬರೆಯುವ ಪರಿಪಾಠವೂ ಇಲ್ಲಿದೆ.

ಮಕ್ಕಳ ಅಂತ್ಯ ಸಂಸ್ಕಾರ ಕಾರ್ಯಕ್ಕೆ ಗ್ರಾಮದವರು ಬಂದಿಲ್ಲ. ವಾಲ್ಮೀಕಿ ಸಮಾಜದ ಸದಸ್ಯರು ಮತ್ತು ಬೇರೆ ಗ್ರಾಮದವರು ಮಾತ್ರ ಬಂದಿದ್ದರು. ಅಲ್ಲಿ ಆಟ ನಡೆಯುತ್ತಿದೆಯೇನೋ ಎಂಬಂತೆ ನಮ್ಮ ನೆರೆಹೊರೆಯವರು ದೂರದಿಂದ ನೋಡುತ್ತಿದ್ದರು. ನಮಗೆ ಇದೇನೂ ಅನಿರೀಕ್ಷಿತವಾಗಿರಲಿಲ್ಲ. ಇಲ್ಲಿ ಜಾತಿ ತಾರತಮ್ಯ ಇದೆ. ಶಾಲೆಯಲ್ಲಿ ನಮ್ಮ ಮಕ್ಕಳನ್ನು ಬೇರೆ ಕಡೆ ಕೂರಿಸುತ್ತಾರೆ. ಅವರದ್ದೇ ಆದ ಪಾತ್ರೆಗಳನ್ನು ಶಾಲೆಗೆ ತರಲು ಹೇಳುತ್ತಾರೆ ಎಂದು ಮೃತ ಮಕ್ಕಳ ಅಪ್ಪ ಮನೋಜ್ ವಾಲ್ಮೀಕಿ ಹೇಳಿದ್ದಾರೆ.

ಭಾವ್‌ಖೆಡಿ ಗ್ರಾಮದಲ್ಲಿ ಸುಮಾರು 300 ಕುಟುಂಬಗಳಿವೆ. ಹೆಚ್ಚಿನವರು ಒಬಿಸಿ ವಿಭಾಗಕ್ಕೆ ಸೇರಿದ ಜಾತವ್ ಸಮುದಾಯದವರಾಗಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಸೇರಿದ ಎರಡೇ ಎರಡು ಮನೆಗಳು ಇಲ್ಲಿವೆ. ಮನೋಜ್ ಅವರ ಮನೆ ಮತ್ತು ಅವರ ಅಪ್ಪ ಕಲ್ಲಾ ಅವರ ಮನೆ. ಇವರು ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ:ಅಣಕಿಸಿ ನಗುತ್ತಿದೆ ಅಸ್ಪೃಶ್ಯತೆ

ಈ ಗ್ರಾಮ ಬಯಲು ಶೌಚ ಮುಕ್ತವಾಗಿದೆ ಎಂದು ಜಿಲ್ಲೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಕಲ್ಲಾ ಅವರ ಮನೆಯಲ್ಲಿ ಶೌಚಾಲಯ ಇದೆ ಆದರೆ ಮನೋಜ್ ಅವರ ಮನೆಯಲ್ಲಿ ಶೌಚಾಲಯ ಇಲ್ಲ. ಸರ್ಕಾರಿ ಭೂಮಿಯೊಂದರಲ್ಲಿ ಗುಡಿಸಲು ನಿರ್ಮಿಸಿ ಮನೋಜ್ ವಾಸವಾಗಿದ್ದಾರೆ. ಶೌಚಾಲಯ ನಿರ್ಮಿಸಲು ನಾನು ಪ್ರಯತ್ನಿಸುತ್ತಿದ್ದು, ಗ್ರಾಮದ ಸರ್‌ಪಂಚ್ ಇದಕ್ಕೆ ತಡೆಯೊಡ್ಡುತ್ತಿದ್ದಾರೆ ಎಂದು ಮನೋಜ್ ಆರೋಪಿಸಿದ್ದಾರೆ.

ಈ ಆರೋಪವನ್ನು ತಳ್ಳಿ ಹಾಕಿದ ಸರ್‌ಪಂಚ್ ಸುರ್ಜಿತ್ ಸಿಂಗ್ ಯಾದವ್, ಕೆಳಜಾತಿ ಜತೆ ಯಾರು ದ್ವೇಷ ಸಾಧಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.