ಧರ್ಮಶಾಲಾ/ ಶಿಮ್ಲಾ: ಮೀಸಲಾತಿ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಖಂಡಿಸಿ ದಲಿತ ಸಮುದಾಯ ಹಾಗೂ ರಿಪಬ್ಲಿಕನ್ ಪಕ್ಷವು ರಾಷ್ಟ್ರವ್ಯಾಪಿ ‘ಚಪ್ಪಲಿಯಲ್ಲಿ ಹೊಡಿ’ ಆಂದೋಲನವನ್ನು ನಡೆಸಲಿದೆ’ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ರಾಮದಾಸ್ ಅಠವಳೆ ತಿಳಿಸಿದರು.
ಅಮೆರಿಕದ ಪ್ರತಿಷ್ಠಿತ ಜಾರ್ಜ್‌ಟೌನ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಇತ್ತೀಚಿಗೆ ಮಾತನಾಡಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದಾಗ ಮೀಸಲಾತಿಯನ್ನು ತೆಗೆದುಹಾಕುವ ಬಗ್ಗೆ ಕಾಂಗ್ರೆಸ್ ಪಕ್ಷವು ಆಲೋಚಿಸಲಿದೆ ಎಂದು ಹೇಳಿದ್ದರು. ಈಗ ಸಮಾನತೆಯ ಪರಿಸ್ಥಿತಿ ಇಲ್ಲ’ ಎಂದೂ ಅವರು ಹೇಳಿದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಅಠವಳೆ, ‘ದಲಿತರು, ಹಿಂದುಳಿದ ವರ್ಗ, ಆದಿವಾಸಿಗಳಿಗೆ ನೀಡಿದ ಮೀಸಲಾತಿಯನ್ನು ಯಾರೂ ಕೂಡ ಕಸಿದುಕೊಳ್ಳಲು ಸಾಧ್ಯವಿಲ್ಲ. ಅಂತಹ ಪ್ರಯತ್ನ ಮಾಡಿದರೆ, ಅದರ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದರು.
‘ಈ ಕುರಿತು ದಲಿತ ಸಮುದಾಯ ಹಾಗೂ ರಿಪಬ್ಲಿಕನ್ ಪಕ್ಷವು ಜತೆಗೂಡಿ ರಾಷ್ಟ್ರವ್ಯಾಪಿ ಹೋರಾಟ ನಡೆಸಲಾಗುವುದು. ಅವರ ವಿರುದ್ಧ ಶೂಗಳನ್ನು ಎಸೆಯಲಾಗುವುದು’ ಎಂದು ತಿಳಿಸಿದರು.
‘ರಾಹುಲ್ ಗಾಂಧಿ ಅನುಪಯುಕ್ತ ಮನುಷ್ಯ. ಅವರು ಇಂಗ್ಲೆಂಡ್, ಅಮೆರಿಕಕ್ಕೆ ಹೋದಾಗಲೆಲ್ಲ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜವಾಬ್ದಾರಿಯುತವಾಗಿ ಹೇಳಿಕೆಗಳನ್ನು ನೀಡಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.