ಕಸ್ಗಂಜ್:ಜಾತಿಯ ಪೂರ್ವಾಗ್ರಹಗಳನ್ನು ತೊಡೆಯುವ ಮೂಲಕ ದಲಿತ ಪುರುಷರು ತಮ್ಮ ಮದುವೆ ಮೆರವಣಿಗೆಯನ್ನು ಠಾಕೂರ್ ಸಮುದಾಯ ಪ್ರಾಬಲ್ಯವಿರುವ ಉತ್ತರಪ್ರದೇಶದ ಕಸ್ಗಂಜ್ ಜಿಲ್ಲೆಯ ನಿಜಾಮ್‌ಪುರ ಗ್ರಾಮದಲ್ಲಿ ಶಾಂತಿಯುತವಾಗಿ ನಡೆಸಿದ್ದಾರೆ.
ವರ ಸಂಜಯ್ ಜತವ್ ಅವರು ಭಾನುವಾರ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಗ್ರಾಮದಲ್ಲಿ 80 ವರ್ಷಗಳ ಬಳಿಕ ತಮ್ಮ ಐತಿಹಾಸಿಕ ಮದುವೆ ಮೆರವಣಿಗೆಯ ಸವಾರಿ ಮಾಡಿದ್ದಾರೆ.
ಸ್ಥಳೀಯ ಠಾಕೂರ್ ಸಮುದಾಯ ಮದುವೆ ಸಮಾರಂಭಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ ವಿಷಯ ಆರು ತಿಂಗಳ ಬಳಿಕ ಗೊತ್ತಾಗಿದೆ. ಹಾಥ್ರಾಸ್‌ನಿಂದ ಬಂದಿದ್ದ ವರನ ಮೆರವಣಿಗೆ ಕುದುರೆ ಸಾರೋಟಿನಲ್ಲಿ ಗ್ರಾಮದಲ್ಲಿ ವಧುವಿನ ಮನೆವರೆಗೆ ನಡೆದಿದೆ.
ಸ್ಥಳೀಯ ಠಾಕೂರ್ ಸಮುದಾಯದವರು ದಲಿತರ ಮದುವೆ ಮೆರವಣಿಗೆಯನ್ನು ವಿರೋಧಿಸಿದ್ದಾರೆ ಮತ್ತು ಇಂತಹ ಘಟನೆಗಳು ಗ್ರಾಮದಲ್ಲಿ ಎಂದಿಗೂ ನಡೆದಿಲ್ಲ ಎಂದು ಹೇಳಿದ್ದಾರೆ.
‘ಈ ಗ್ರಾಮದಲ್ಲಿ ಮೇಲ್ವರ್ಗ ಜಾತಿ ಜನರು ನಮ್ಮ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದ್ದರಿಂದ, ನಾವು ಪೊಲೀಸರ ರಕ್ಷಣೆ ಪಡೆದುಕೊಂಡಿದ್ದರಿಂದ ಭಯ ಕಡಿಮೆಯಾಗಿದೆ’ ಎಂದು ವಧು ಶೀತಾಳ ಅವರು ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಮದುವೆಯ ನಂತರ ಗ್ರಾಮದಲ್ಲಿ ಯಾವುದೇ ಅನಿರೀಕ್ಷಿತ ಅಹಿತಕರ ಘಟನೆ ನಡೆಯದಂತೆ ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿ ಎಚ್ಚರ ವಹಿಸಿದ್ದಾರೆ ಎಂದು ಹೆಚ್ಚುವರಿ ಎಸ್ಪಿ ಪವಿತ್ರ ಮೋಹನ್ ತ್ರಿಪಾಠಿ ಹೇಳಿದ್ದಾರೆ.
ಮೆರವಣಿಗೆ ನಡೆಸಿದಾಗ ಯಾವುದೇ ಸಮಸ್ಯೆಯಾಗಿಲ್ಲ. ವಿವಾಹ ಕಾರ್ಯ ಮುಗಿಯುವವರೆಗೆ ನಾವು ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಮದುವೆಯ ಬಳಿಕ ನಮ್ಮ ಸಿಬ್ಬಂದಿ ಗ್ರಾಮದಲ್ಲಿ ಜಾಗರೂಕರಾಗಿರುವುದರಿಂದ ಯಾವುದೇ ಅನಿರೀಕ್ಷಿತ ಘಟನೆಗಳು ನಡೆಯದಂತೆ ತಡೆಯುತ್ತಾರೆ ಎಂದು ತ್ರಿಪಾಠಿ ತಿಳಿಸಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರಾಂತೀಯ ಶಸ್ತ್ರಸಜ್ಜಿತ ಪಡೆ(ಪಿಎಸಿ) ಜತೆಗೆ 150ಕ್ಕಿಂತಲೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಗ್ರಾಮದಲ್ಲಿ ನಿಯೋಜಿಸಲಾಗಿತ್ತು.
ಜಿಲ್ಲಾಡಳಿತದ ಪ್ರಕಾರ, ಎರಡು ಜಿಲ್ಲೆಗಳ ಮಧ್ಯದ ಗಡಿ ಸ್ಥಳದಿಂದ ಗ್ರಾಮದ ವರೆಗೆ ಕಸ್ಗಂಜ್ ಪೊಲೀಸರು ವರನಿಗೆ ಬೆಂಗಾವಲು ಭದ್ರತೆ ಒದಗಿಸಿದ್ದರು. ಭಾರೀ ಭದ್ರತೆಯ ಮಧ್ಯೆ ಮದುವೆ ಮೆರವಣಿಗೆ ಶಾಂತಿಯುತವಾಗಿ ಕೊನೆಗೊಂಡಿದೆ.
‘ವಧುವಿನ ಮನೆಗೆ 500 ಮೀಟರ್ ದೂರದಿಂದ ಮೆರವಣಿಗೆ ತೆರಳಲು ನಾವು ಒಂದು ಮಾರ್ಗವನ್ನು ಸೂಚಿಸಿದ್ದೆವು. ಉಳಿದಂತೆ ಇತರ ಕಾರ್ಯಕ್ರಮಗಳು ಜಮೀನಿನಲ್ಲಿ ನಡೆದವು’ ಎಂದು ಜಿಲ್ಲಾಡಳಿತವು ವರನಿಗೆ ನೀಡಿದ್ದ ಮಾರ್ಗಸೂಚಿಯ ಬಗ್ಗೆ ಜಿಲ್ಲಾಧಿಕಾರಿ ಆರ್.ಎಂ. ಸಿಂಗ್ ತಿಳಿಸಿದ್ದಾರೆ ಎಂದು ಬ್ಯುಸ್ನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.