ಹೈದರಾಬಾದ್: ಮೇಕೆ ಮತ್ತು ಕಬ್ಬಿಣದ ಪೈಪ್ ಕಳವು ಮಾಡಿದ್ದಾನೆಂದು ಶಂಕಿಸಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯನ್ನು ದನದ ಕೊಟ್ಟಿಗೆಯಲ್ಲಿ ತಲೆಕೆಳಗು ಮಾಡಿ ನೇತು ಹಾಕಿ, ವ್ಯಕ್ತಿಯೊಬ್ಬ ಮತ್ತು ಆತನ ಕುಟುಂಬ ಸದಸ್ಯರು ಹಲ್ಲೆ ನಡೆಸಿದ ಪ್ರಕರಣ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಜಿಲ್ಲೆಯ ಮಂಡಮರ್‍ರಿ ಮಂಡಲ್‌ನಲ್ಲಿ ಸೆ.1ರಂದು ಈ ಪ್ರಕರಣ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಆತನ ಸಂಬಂಧಿಕರು ರಕ್ಷಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಹಲ್ಲೆ ನಡೆಸಿರುವ ಕೃತ್ಯದ ಅಸ್ಪಷ್ಟ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದಿದೆ.
ದಲಿತ ವ್ಯಕ್ತಿಯನ್ನು ದನದ ಕೊಟ್ಟಿಗೆಯಲ್ಲಿ ತಲೆಕೆಳಗಾಗಿ ನೇತುಹಾಕಿ, ದೊಣ್ಣೆಯಿಂದ ಹೊಡೆದು, ನೆಲದ ಮೇಲೆ ಬೆಂಕಿ ಹಚ್ಚಿದ್ದಾರೆ. ಈತನೊಂದಿಗೆ ಕೆಲಸ ಮಾಡುತ್ತಿದ್ದ ಸ್ನೇಹಿತನನ್ನು ಕೂಡ ಇದೇ ರೀತಿ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ದಲಿತ ವ್ಯಕ್ತಿಯ ಚಿಕ್ಕಮ್ಮ ಶನಿವಾರ ಪೊಲೀಸರನ್ನು ಸಂಪರ್ಕಿಸಿ, ತನ್ನ ಸಂಬಂಧಿಕರಿಗೆ ನಾಲ್ವರು ಚಿತ್ರಹಿಂಸೆ ನೀಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ದೂರು ಆಧರಿಸಿ ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಲ್ಲೆ ನಡೆಸಿದ ವ್ಯಕ್ತಿ ಮತ್ತು ಆತನ ಪತ್ನಿ, ಪುತ್ರ ಹಾಗೂ ಕೃತ್ಯಕ್ಕೆ ನೆರವಾದ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.