ಲಖನೌ: ತಾವು ಕೆಲಸ ಮಾಡುತ್ತಿರುವ ಶಾಲೆಯ ಪ್ರಾಂಶುಪಾಲರು ಸೇರಿ ಕೆಲ ಸಹೋದ್ಯೋಗಿಗಳುತಮ್ಮ ಜುಟ್ಟು ಕತ್ತರಿಸಿದ್ದಾರೆ.ತಾವು ಪರಿಶಿಷ್ಟ ವರ್ಗಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಸಂಸ್ಕೃತ ಶಿಕ್ಷಕರೊಬ್ಬರು ಆರೋಪ ಮಾಡಿದ್ದಾರೆ.
ಈ ಕುರಿತು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆಅವರು ಪತ್ರ ಬರೆದಿದ್ದಾರೆ. ‘ಮೇಲ್ವರ್ಗಕ್ಕೆ ಸೇರಿರುವ ಪ್ರಾಂಶುಪಾಲರು ಮತ್ತು ಕೆಲ ಸಿಬ್ಬಂದಿ ಒಂದು ಗುಂಪನ್ನು ಮಾಡಿಕೊಂಡಿದ್ದಾರೆ. ಅವರು ನನ್ನನ್ನು ನಿಂದಿಸುತ್ತಾರೆ. ಕೆಲ ದಿನಗಳ ಕೆಳಗೆ ಅವರು ನನ್ನ ಜುಟ್ಟನ್ನೂ ಕತ್ತರಿಸಿದ್ದಾರೆ’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ ಎಂದು ವರದಿ ಆಗಿದೆ.
ಈ ಆರೋಪಗಳನ್ನು ಶಾಲೆಯ ಪ್ರಾಂಶುಪಾಲರು ಅಲ್ಲಗಳೆದಿದ್ದಾರೆ. ಅಶಿಸ್ತಿನ ಕಾರಣಕ್ಕಾಗಿ ಸಂಸ್ಕೃತ ಶಿಕ್ಷಕನನ್ನು ಅಮಾನತು ಮಾಡಲಾಗಿತ್ತು. ಕೆಲ ತಿಂಗಳ ಹಿಂದಷ್ಟೇ ಅವರನ್ನು ಉದ್ಯೋಗಕ್ಕೆ ಪುನಃ ಸೇರಿಸಿಕೊಳ್ಳಲಾಯಿತು ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲೆಯ ಹಿರಿಯ ಶಿಕ್ಷಣಾಧಿಕಾರಿ, ‘ಈ ಆರೋಪದ ಕುರಿತು ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.
ಇದೇ ವೇಳೆ, ಉತ್ತರ ಪ್ರದೇಶದ ಶಾಲೆಯೊಂದಲ್ಲಿ ಸೆರೆಹಿಡಿಯಲಾದ ವಿಡಿಯೊಯೊಂದು ವೈರಲ್ ಆಗಿದೆ. ಬರಿಗಾಲಿನಲ್ಲಿರುವ ಶಾಲೆಯ ಮಕ್ಕಳು ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಸ್ಥಳದಲ್ಲಿ ನಿಂತಿರುವ ವ್ಯಕ್ತಿಯೊಬ್ಬರು ಮಕ್ಕಳನ್ನು ಬೈಯುತ್ತಿದ್ದಾರೆ. ಈ ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಬಲಿಯಾ ಜಿಲ್ಲೆಯ ಶಿಕ್ಷಣಾಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.