ADVERTISEMENT

ಉತ್ತರ ಪ್ರದೇಶ: ಶಿಕ್ಷಕರ ಹೂಜಿಯಿಂದ ನೀರು ಕುಡಿದ ದಲಿತ ವಿದ್ಯಾರ್ಥಿನಿ ಮೇಲೆ ಹಲ್ಲೆ

ಐಎಎನ್ಎಸ್
Published 8 ಮೇ 2022, 6:51 IST
Last Updated 8 ಮೇ 2022, 6:51 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಲಖನೌ: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಛಿಕಾರ ಗ್ರಾಮದ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕರ ಹೂಜಿಯಿಂದ ನೀರು ಕುಡಿದಿದ್ದಕ್ಕಾಗಿ ದಲಿತ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹೆಚ್ಚುವರಿ ಶಿಕ್ಷಣ ಅಧಿಕಾರಿ ಅವರಿಗೆ ಸೂಚಿಸಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟರು ಆದೇಶಿಸಿದ್ದಾರೆ.

ಈ ಮಧ್ಯೆ, ವಿದ್ಯಾರ್ಥಿಯ ಕುಟುಂಬದವರು ಹಾಗೂ ಗ್ರಾಮದ ಜನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ADVERTISEMENT

ಸಂತ್ರಸ್ತೆಯು ಛಿಕಾರ ಗ್ರಾಮದ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪ್ರತ್ಯೇಕ ಹೂಜಿಗಳಲ್ಲಿ ಕುಡಿಯುವ ನೀರು ಇಡಲಾಗುತ್ತದೆ. ಶನಿವಾರ ವಿದ್ಯಾರ್ಥಿಗಳ ಹೂಜಿಯಲ್ಲಿ ನೀರು ಇಲ್ಲದಿದ್ದುದರಿಂದ ಆಕೆ ಶಿಕ್ಷಕರ ಹೂಜಿಯಿಂದ ನೀರು ಕುಡಿದಿದ್ದಳು. ಇದಕ್ಕಾಗಿ ಶಿಕ್ಷಕರು ಆಕೆಗೆ ಹೊಡೆದಿದ್ದರು. ಆಕೆ ಮನೆಗೆ ತೆರಳಿ ಪಾಲಕರ ಬಳಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಳು.

ಶಿಕ್ಷಕರು ಹೊಡೆದಿದ್ದು ಮಾತ್ರವಲ್ಲದೆ ಜಾತಿ ನಿಂದನೆಯನ್ನೂ ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯ ತಂದೆ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.