ADVERTISEMENT

ಗೋಣಿಚೀಲದಲ್ಲಿ ಮಹಿಳೆಯ ಶವ ಪತ್ತೆ; ರಾಜಕೀಯ ದ್ವೇಷದಿಂದ ಹತ್ಯೆ ನಡೆದಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 14:24 IST
Last Updated 20 ನವೆಂಬರ್ 2024, 14:24 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಲಖನೌ (ಉತ್ತರ ಪ್ರದೇಶ): ಮೈನ್‌ಪುರಿ ಜಿಲ್ಲೆಯ ಕರಹಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉಪ ಚುನಾವಣೆ ಮತದಾನದ ದಿನವೇ ದಲಿತ ಮಹಿಳೆಯೊಬ್ಬರ ಶವವು ಗೋಣಿಚೀಲದಲ್ಲಿ ದೊರೆತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ರಾಜಕೀಯ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ ಎಂದು ಮೂಲಗಳು ಹೇಳಿವೆ. 

ಮೃತ ಮಹಿಳೆಯ ಕುಟುಂಬದವರು ನೀಡಿದ ದೂರನ್ನು ಆಧರಿಸಿ ನಗಲಾ ಎಂಟಿ ಎಂಬ ಪ್ರದೇಶದಲ್ಲಿ ಶವ ದೊರೆತಿದ್ದು, ಪ್ರಶಾಂತ್ ಯಾದವ್ ಹಾಗೂ ದುರ್ಗಾ ಯಾದವ್ ಎಂಬಿಬ್ಬರನ್ನು ಬಂಧಿಸಲಾಗಿದೆ. 28 ವರ್ಷದ ಮಹಿಳೆಯು ಮಂಗಳವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. 

ADVERTISEMENT

ಬುಧವಾರ ಕರಹಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾನ ನಡೆಯಿತು. ನಿರ್ದಿಷ್ಟ ಪಕ್ಷಕ್ಕೆ ಮತ ಹಾಕುವಂತೆ ದಲಿತ ಮಹಿಳೆಗೆ ಪ್ರಶಾಂತ್ ಹಾಗೂ ದುರ್ಗಾ ತಾಕೀತು ಮಾಡಿದ್ದರು. ಅದಕ್ಕೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಆಕೆಯ ಹತ್ಯೆ ಮಾಡಲಾಗಿದೆ ಎಂದು ಮೃತ ಮಹಿಳೆಯ ತಾಯಿ ಆರೋಪಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. 

ಚುನಾವಣಾ ದ್ವೇಷದ ಕಾರಣದಿಂದ ಹತ್ಯೆ ನಡೆದಿದೆಯೇ ಎನ್ನುವುದನ್ನೂ ದೃಷ್ಟಿಯಲ್ಲಿಟ್ಟುಕೊಂಡು ತನಿಖೆ ನಡೆಸುತ್ತಿರುವುದಾಗಿ ಮೈನ್‌ಪುರಿಯ ಪೊಲೀಸರು ಹೇಳಿದರು. 

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಕರಹಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಕನೌಜ್‌ನಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮೇಲೆ ಅವರು ಇಲ್ಲಿನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಆ ಸ್ಥಾನಕ್ಕೆ ಚುನಾವಣೆ ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.