ADVERTISEMENT

ಮಧ್ಯಪ್ರದೇಶ | ದಲಿತ ಯುವಕನನ್ನು ವಿವಸ್ತ್ರಗೊಳಿಸಿ ತೀವ್ರ ಹಲ್ಲೆ: ಮೂವರ ಬಂಧನ

ಪಿಟಿಐ
Published 26 ಜೂನ್ 2024, 13:21 IST
Last Updated 26 ಜೂನ್ 2024, 13:21 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಛತ್ತರ್‌ಪುರ: ದಲಿತ ಯುವಕನೊಬ್ಬನನ್ನು ವಿವಸ್ತ್ರಗೊಳಿಸಿ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ನಗರದಲ್ಲಿ ನಡೆದಿದೆ. ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ದೇವಾ ಅಲಿಯಾಸ್ ದೇವೇಂದ್ರ ಠಾಕೂರ್, ಲಕ್ಕಿ ಘೋಷಿ ಹಾಗೂ ಅನ್ನು ಘೋಷಿ ಎಂದು ಗುರುತಿಸಲಾಗಿದೆ. ಜತೆಗೆ, ಕೃತ್ಯದ ವೇಳೆ ಬಳಸಿದ್ದ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಛತ್ತರ್‌ಪುರದ ಪೊಲೀಸ್ ವರಿಷ್ಠಾಧಿಕಾರಿ ಆಗಮ್ ಜೈನ್ ಹೇಳಿದ್ದಾರೆ.

ADVERTISEMENT

ಆರೋಪಿಗಳು ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಯುವಕನ ತಲೆಯಿಂದ ರಕ್ತ ಸುರಿಯುತ್ತಿದ್ದರೂ ಬಿಡದ ಇಬ್ಬರು ಆರೋಪಿಗಳು ಆತನನ್ನು ವಿವಸ್ತ್ರಗೊಳಿಸಿದ್ದಾರೆ. ಮತ್ತೊಬ್ಬ ಆರೋಪಿ ಸಂತ್ರಸ್ತನಿಗೆ ಬೆಲ್ಟ್‌ ಹಾಗೂ ನಾಡ ಪಿಸ್ತೂಲ್‌ನಿಂದ ಹೊಡೆಯುವ ಮೂಲಕ ವಿಡಿಯೊ ಚಿತ್ರೀಕರಣ ಮಾಡಿದ್ದಾನೆ. ಬಳಿಕ ಘಟನಾ ಸ್ಥಳದಿಂದ ಬೆತ್ತಲೆಯಾಗಿ ಓಡಿ ಹೋಗುವಂತೆ ಆತನಿಗೆ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ನೀಡಿದ ದೂರು ಆಧರಿಸಿ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಪರಿಶಿಷ್ಟ ಜಾತಿ –ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಕೊಲೆ ಯತ್ನ, ಅಪಹರಣ, ದರೋಡೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.