ವಯನಾಡ್: ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಹಾನಿ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವಯನಾಡ್ ಕಚೇರಿಯ ಇಬ್ಬರು ಸಿಬ್ಬಂದಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಎರಡು ತಿಂಗಳ ಹಿಂದೆ ಎಸ್‌ಎಫ್‌ಐ (ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ) ಕಾರ್ಯಕರ್ತರು ನಡೆಸಿದ್ದ ಹಿಂಸಾತ್ಮಕ ಪ್ರತಿಭಟನೆ ವೇಳೆ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಹಾನಿ ಎಸಗಲಾಗಿತ್ತು.
ನಾಲ್ವರನ್ನು ಬಂಧಿಸಿರುವುದಾಗಿ ಪೊಲೀಸರು ಖಚಿತಪಡಿಸಿದ್ದಾರೆ. ಬಂಧಿತರ ಪೈಕಿ ಇಬ್ಬರು ರಾಹುಲ್ ಗಾಂಧಿ ಅವರ ಕಚೇರಿಯ ಸಿಬ್ಬಂದಿ ಎಂಬುದನ್ನು ಕಾಂಗ್ರೆಸ್ ಮೂಲಗಳು ದೃಢಪಡಿಸಿವೆ. ಇನ್ನಿಬ್ಬರು ಪಕ್ಷದ ಕಾರ್ಯಕರ್ತರು ಎಂದು ಮೂಲಗಳು ಹೇಳಿವೆ.
‘ಜೂನ್ 24ರಂದು ಎಸ್‌ಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ರಾಹುಲ್ ಗಾಂಧಿ ಅವರ ಕಚೇರಿಗೆ ಹಾನಿ ಮಾಡಿದ್ದರು. ಆ ಸಂದರ್ಭದಲ್ಲಿ, ರಾಹುಲ್ ಗಾಂಧಿ ಅವರ ಕಚೇರಿಯಲ್ಲಿದ್ದ ಮಹಾತ್ಮ ಗಾಂಧಿ ಭಾವಚಿತ್ರಕ್ಕೂ ಹಾನಿ ಮಾಡಲಾಗಿತ್ತು’ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಎಸ್‌ಎಫ್‌ಐ ಕಾರ್ಯಕರ್ತರು ರಾಹುಲ್ ಗಾಂಧಿ ಅವರ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ವಿಡಿಯೊವನ್ನು ಜೂನ್ 24ರಂದು ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.