ಕೋಲ್ಕತ್ತ: ‘ ತೃಣಮೂಲ ಕಾಂಗ್ರೆಸ್‌ನಿಂದ ನಾನು ಸಭ್ಯತೆ ಹಾಗೂ ನೈತಿಕತೆ ಕಲಿಯಬೇಕಾಗಿಲ್ಲ. ಧೈರ್ಯವಿದ್ದರೆ ಪೊಲೀಸರು ನನ್ನನ್ನು ಬಂಧಿಸಲಿ, ಟಿಎಂಸಿ ಕಾರ್ಯಕರ್ತರು ನನ್ನ ಮೇಲೆ ಕೈ ಮಾಡಲಿ’ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಅವರು ಹೇಳಿದ್ದಾರೆ.
ಘೋಷ್ ಅವರುಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ತೃಣಮೂಲ ಕಾಂಗ್ರೆಸ್ ನಿಯೋಗವು ಅಲ್ಲಿನ ರಾಜ್ಯಪಾಲ ಜಗದೀಪ್ ಧನಪಾಲ್ ಅವರನ್ನು ಭೇಟಿ ಮಾಡಿದೆ. ಧನಪಾಲ್ ಅವರು ಈ ವಿಷಯವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ ಕೆಲವೇ ಗಂಟೆಗಳಲ್ಲಿ ಘೋಷ್ ಈ ಹೇಳಿಕೆ ನೀಡಿದ್ದಾರೆ.
‘ನಾನು ಮಮತಾ ಅವರ ವಿರುದ್ಧ ಯಾವುದೇ ಅನುಚಿತ ಟೀಕೆ ಮಾಡಿಲ್ಲ. ಮಮತಾ ಅವರು ಪ್ರತಿನಿಧಿಸುವ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿಯೂ ಸಹ ಟಿಎಂಸಿಯ ಅಕ್ರಮ ಕಮಿಷನ್ ದಂಧೆ ಹಾಗೂ ತನ್ನ ವಿರೋಧಿಗಳ ಮೇಲೆ ಟಿಎಂಸಿ ಮಾಡುತ್ತಿರುವ ಮಾಡಿದ ದೌರ್ಜನ್ಯಗಳ ವಿರುದ್ಧ ಮಾತನಾಡುವುದನ್ನು ಮುಂದುವರಿಸುತ್ತೇನೆ’ ಎಂದು ದಿಲೀಪ್ ಘೋಷ್ ಸ್ಪಷ್ಟಪಡಿಸಿದ್ದಾರೆ.
‘ಪಶ್ಚಿಮ ಬಂಗಾಳ ಪೊಲೀಸರು ನನ್ನನ್ನು ಬಂಧಿಸಲಿ. ನಾನು ಯಾವುದೇ ಹಣವನ್ನು ತೆಗೆದುಕೊಂಡಿಲ್ಲ, ನನ್ನ ಅಭಿಪ್ರಾಯಗಳನ್ನು ವಿರೋಧಿಸಿದ್ದಕ್ಕಾಗಿ ನಾನು ಜನರನ್ನು ಥಳಿಸಿಲ್ಲ. ಆದರೂ, ಕಾನೂನು ಜಾರಿಗೊಳಿಸುವವರು ನನ್ನನ್ನು ಕಂಬಿಯ ಹಿಂದೆ ಹಾಕಲು ಬಯಸುತ್ತಾರೆ. ನನ್ನ ಬಂಧನಕ್ಕೆ ಆಡಳಿತರೂಢ ಸರ್ಕಾರ ಪೊಲೀಸರನ್ನು ಕಳುಹಿಸಲಿ’ ಎಂದು ಘೋಷ್ ಅವರು ಗುರುವಾರ ತಿಳಿಸಿದರು.
"ಕಳೆದ ವರ್ಷದ ವಿಧಾನಸಭಾ ಚುನಾವಣೆಯಿಂದ ನಮ್ಮ ಪಕ್ಷದ ಹಲವಾರು ನಾಯಕರು ಮತ್ತು ತಳಮಟ್ಟದ ಕಾರ್ಯಕರ್ತರ ಜೀವವನ್ನು ತೆಗೆದುಕೊಂಡಿರುವಂತಹ ಟಿಎಂಸಿಯಿಂದ ನಾನು ನೈತಿಕತೆ ಅಥವಾ ಸಭ್ಯತೆಯನ್ನು ಕಲಿಯುವುದಿಲ್ಲ. ಸರ್ಕಾರದ ಹಣವನ್ನು ಕಸಿದುಕೊಳ್ಳುವ ಮತ್ತು ಬಡವರ ಸಹಾಯದ ಹಣವನ್ನು ಬೇರೆಡೆಗೆ ತಿರುಗಿಸುವ ಭ್ರಷ್ಟರಿಂದ ನಾನು ಏನನ್ನೂ ಕಲಿಯುವುದಿಲ್ಲ’ ಎಂದು ಘೋಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.