ADVERTISEMENT

ಕೋಟ: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ‘ದರ್ವಾಜೆ ಪೇ ದಸ್ತಕ್‌’ 

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2023, 0:30 IST
Last Updated 4 ಸೆಪ್ಟೆಂಬರ್ 2023, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೋಟ (ರಾಜಸ್ಥಾನ): ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ‘ಹಬ್‌’ ಎನಿಸಿಕೊಂಡಿರುವ ರಾಜಸ್ಥಾನದ ಕೋಟ ಸದ್ಯ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗಳಿಂದ ತತ್ತರಿಸಿದೆ. ಇದನ್ನು ತಡೆಯುವ ಪ್ರಯತ್ನವಾಗಿ ಪೊಲೀಸರು ‘ದರ್ವಾಜೆ ಪೇ ದಸ್ತಕ್‌ (ಬಾಗಿಲು ಬಡಿಯುವುದು)’ ವಿನೂತನ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.    

ವಾರ್ಡನ್‌ಗಳು, ಮೆಸ್ ಕೆಲಸಗಾರರು ಮತ್ತು ಉಪಹಾರ ಪೂರೈಕೆದಾರರ ನೆರವು ಪಡೆಯುತ್ತಿರುವ ಪೊಲೀಸರು, ಹಾಸ್ಟೆಲ್‌, ಪೇಯಿಂಗ್‌ ಗೆಸ್ಟ್‌( ಪಿಜಿ) ಗಳಲ್ಲಿರುವ ವಿದ್ಯಾರ್ಥಿಗಳು ಖಿನ್ನತೆ ಅಥವಾ ಒತ್ತಡಕ್ಕೆ ಒಳಗಾಗಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಸೂಚಿಸಿದ್ದಾರೆ.  

ADVERTISEMENT

ಮೆಸ್‌ನಲ್ಲಿ ಭೋಜನ ಸೇವನೆಗೆ ನಿರಂತರವಾಗಿ ಗೈರಾಗುತ್ತಿರುವವರು, ತಟ್ಟೆಯಲ್ಲಿ ಊಟ ಬಿಡುತ್ತಿರುವವರ ಮೇಲೆ ಕಣ್ಣಿಡುವಂತೆ ಪೊಲೀಸರು ವಾರ್ಡನ್‌, ಮೆಸ್‌ ಕೆಲಸಗಾರರಿಗೆ ತಿಳಿಸಿದ್ದಾರೆ. ಇಂಥ ಲಕ್ಷಣಗಳು ಕಂಡು ಬಂದ ಕೂಡಲೇ ತಿಳಿಸುವಂತೆ ಹೇಳಿದ್ದಾರೆ.  

‘ನಾವು 'ದರ್ವಾಜೆ ಪೇ ದಸ್ತಕ್' ಎಂಬ ಅಭಿಯಾನವನ್ನು ಆರಂಭಿಸಿದ್ದೇವೆ. ರಾತ್ರಿ 11 ಗಂಟೆಯ ಸುಮಾರಿಗೆ ಪ್ರತಿ ವಿದ್ಯಾರ್ಥಿಯ ಕೊಠಡಿಯ ಬಾಗಿಲು ಬಡಿಯುವುದನ್ನು ರೂಢಿ ಮಾಡಿಕೊಳ್ಳುವಂತೆ ವಾರ್ಡನ್‌, ಪಿಜಿ, ಮೆಸ್‌ ಕೆಲಸಗಾರರಿಗೆ ತಿಳಿಸಿದ್ದೇವೆ. ವಿದ್ಯಾರ್ಥಿಗಳು ಸರಿಯಾಗಿದ್ದಾರೆಯೇ ಎಂದು ಅವರನ್ನು ಕೇಳಿ ತಿಳಿದುಕೊಳ್ಳುವಂತೆ, ಅವರ ಚಟುವಟಿಕೆಗಳನ್ನು ಗಮನಿಸುವಂತೆಯೂ ಸೂಚಿಸಲಾಗುತ್ತಿದೆ. ವಿದ್ಯಾರ್ಥಿಗಳು ಒತ್ತಡ, ಖಿನ್ನತೆ ಅಥವಾ ಅಸಹಜ ಚಟುವಟಿಕೆಯಲ್ಲಿ ತೊಡಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ತಿಳಿಸಲಾಗಿದೆ. ಅಂಥ ಲಕ್ಷಣಗಳು ಕಂಡು ಬಂದರೆ ವಿದ್ಯಾರ್ಥಿಗೆ ಆಪ್ತ ಸಲಹೆ ಕೊಡಿಸಬೇಕಾಗುತ್ತದೆ‘ ಎಂದು ಕೋಟದ ಎಎಸ್‌ಪಿ ಚಂದ್ರಶೀಲ್ ಠಾಕೂರ್ ಪಿಟಿಐಗೆ ತಿಳಿಸಿದರು.

ಜೆಇಇ ಮತ್ತು ನೀಟ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ವಾರ್ಷಿಕ 2.5 ಲಕ್ಷ ವಿದ್ಯಾರ್ಥಿಗಳು ಕೋಟಕ್ಕೆ ಬಂದು ತರಬೇತಿ ಕೇಂದ್ರಗಳಿಗೆ ದಾಖಲಾಗುತ್ತಾರೆ. 

2023ರಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇದುವರೆಗೆ 22 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆಗಸ್ಟ್ 27 ರಂದು ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಜೀವ ಬಿಟ್ಟಿದ್ದರು. ಕಳೆದ ವರ್ಷ 15 ಮಂದಿ ಮೃತಪಟ್ಟಿದ್ದರು. ಬಿಗಿ ವೇಳಾಪಟ್ಟಿ, ತೀವ್ರ ಸ್ಪರ್ಧೆ, ಉತ್ತಮ ಸಾಧನೆಗಾಗಿ ಒತ್ತಡ, ಪೋಷಕರ ನಿರೀಕ್ಷೆಗಳ ಹೊರೆ ಇಲ್ಲಿನ ವಿದ್ಯಾರ್ಥಿಗಳ ಸಾಮಾನ್ಯ ಸಮಸ್ಯೆಗಳೆನಿಸಿವೆ.

ಕೋಟದಲ್ಲಿ 3,500 ಹಾಸ್ಟೆಲ್‌ಗಳು, 25 ಸಾವಿರ ಪಿಜಿಗಳು ಇವೆ ಎಂದು ಕೋಟ ಹಾಸ್ಟೆಲ್‌ಗಳ ಸಂಘದ ಅಧ್ಯಕ್ಷ ನವೀನ್‌ ಮಿತ್ತಲ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.