ADVERTISEMENT

ಅಮೃತ್‌ಪಾಲ್‌ ಸಿಂಗ್‌ ಪರ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಜಾ

ಪಿಟಿಐ
Published 24 ಏಪ್ರಿಲ್ 2023, 13:42 IST
Last Updated 24 ಏಪ್ರಿಲ್ 2023, 13:42 IST
ಅಮೃತ್‌ಪಾಲ್ ಸಿಂಗ್‌
ಅಮೃತ್‌ಪಾಲ್ ಸಿಂಗ್‌   

ಚಂಡೀಗಢ: ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರ ಪ್ರತಿಪಾದಕ ಮತ್ತು ಸಿಖ್‌ ಮೂಲಭೂತವಾದಿ ಅಮೃತ್‌ಪಾಲ್‌ ಸಿಂಗ್‌ ಅವರನ್ನು  ಪೊಲೀಸರು ಅಕ್ರಮ ಬಂಧನದಲ್ಲಿರಿಸಿದ್ದಾರೆಂದು ಆರೋಪಿಸಿ ಮಾರ್ಚ್‌ 19ರಂದು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ.

‘ವಾರಿಸ್‌ ಪಂಜಾಬ್‌ ದೇ’ ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್‌ ಸಿಂಗ್‌ ಅವರನ್ನು ಪಂಜಾಬ್‌ನ ಮೊಗ ಜಿಲ್ಲೆಯ ರೋಡೆ ಗ್ರಾಮದಲ್ಲಿ ಭಾನುವಾರ ಬಂಧಿಸಿದ ಮರು ದಿನವೇ ಹೇಬಿಯಸ್‌ ಕಾರ್ಪಸ್‌ ಅರ್ಜಿ ಇನ್ನು ನಿರರ್ಥಕವೆಂದು ಹೈಕೋರ್ಟ್‌ ವಜಾಗೊಳಿಸಿದೆ. ಅಮೃತ್‌ಪಾಲ್‌ ಸಿಂಗ್‌ ಪರ ಅವರ ವಕೀಲ ಇಮಾನ್ ಸಿಂಗ್ ಖಾರಾ ಅವರು ಈ ಅರ್ಜಿ ಸಲ್ಲಿಸಿದ್ದರು. ಸಿಂಗ್‌ ಅವರ ಪತ್ನಿ ಕೂಡ ಇದೇ ಆರೋಪ ಮಾಡಿದ್ದರು.

ಈ ಹಿಂದಿನ ವಿಚಾರಣೆ ವೇಳೆ ಅಮೃತಪಾಲ್ ಸಿಂಗ್ ಅವರನ್ನು ಇನ್ನೂ ಬಂಧಿಸಿಲ್ಲವೆಂದು ಪಂಜಾಬ್ ಸರ್ಕಾರ ಕೋರ್ಟ್‌ಗೆ ತಿಳಿಸಿತ್ತು. ಸಿಂಗ್‌ ಅವರನ್ನು ಪೊಲೀಸರ ಅಕ್ರಮ ಬಂಧನದಲ್ಲಿರಿಸಿದ್ದಾರೆಂದು ಅರ್ಜಿದಾರ ಇಮಾನ್ ಸಿಂಗ್ ಖಾರಾ ಆರೋಪಿಸಿದ್ದರು. ಈ ಆರೋಪ ಸಾಬೀತುಪಡಿಸಲು ಸಾಕ್ಷ್ಯ ಒದಗಿಸಿದಲ್ಲಿ ವಾರಂಟ್ ಅಧಿಕಾರಿ ನೇಮಿಸುವುದಾಗಿ ನ್ಯಾಯಮೂರ್ತಿ ಎನ್‌.ಎಸ್‌. ಶೇಖಾವತ್‌ ಹೇಳಿದ್ದರು. ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಮೇ 1ಕ್ಕೆ ಅವರು ನಿಗದಿಪಡಿಸಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.