ನವದೆಹಲಿ: ಚೀತಾ ಕಾರ್ಯಪಡೆಯಲ್ಲಿರುವ ತಜ್ಞರ ಅರ್ಹತೆ ಮತ್ತು ಅನುಭವದ ಕುರಿತು ವಿವರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್ ಹೇಳಿದೆ. ನಮೀಬಿಯಾದಿಂದ ಭಾರತದ ಕುನೊ ರಾಷ್ಟ್ರೀಯ ಉದ್ಯಾನ ತರಲಾಗಿದ್ದ ಎಂಟು ಚೀತಾಗಳ ಪೈಕಿ ಒಂದು ಚೀತಾ ಮೃತಪಟ್ಟ ಮರುದಿನವೇ ಸುಪ್ರೀಂ ಕೋರ್ಟ್ ಹೀಗೆ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ವಿಕ್ರಂನಾಥ್ ಅವರಿದ್ದ ಪೀಠವು ಈ ನಿರ್ದೇಶನ ನೀಡಿದೆ. ಮಾಹಿತಿ ನೀಡಲು ಎರಡು ವಾರಗಳ ಕಾಲಾವಕಾಶವನ್ನು ಪೀಠ ನೀಡಿದೆ.
2020ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ್ದ ತಜ್ಞರ ಸಮಿತಿಯಿಂದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (ಎನ್‌ಟಿಸಿಎ) ಕಡ್ಡಾಯವಾಗಿ ಮತ್ತು ಅಗತ್ಯವಾಗಿ ನಿರ್ದೇಶನಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವ ವೇಳೆ ಸುಪ್ರೀಂ ಕೋರ್ಟ್ ಈ ನಿರ್ದೇಶನವನ್ನು ನೀಡಿದೆ.
‘ಸೆಂಟರ್ ಫಾರ್ ಎನ್ವಿರಾನ್‌ಮೆಂಟ್ ಲಾ ಡಬ್ಲ್ಯುಡಬ್ಲ್ಯುಎಫ್’ ಎಂಬ ಎನ್‌ಜಿಒ ಪರವಾಗಿ ಕೋರ್ಟ್‌ನಲ್ಲಿ ಹಾಜರಿದ್ದ ಹಿರಿಯ ವಕೀಲ ಪ್ರಶಾಂತೋ ಚಂದ್ರ ಸೇನ್ ಅವರು, ‘ಚೀತಾ ಕಾರ್ಯಪಡೆಯಲ್ಲಿ ಚೀತಾ ತಜ್ಞರು ಇಲ್ಲ. ಚೀತಾಗಳ ನಿರ್ವಹಣೆ ಕುರಿತು ಉತ್ತಮ ಅನುಭವ ಮತ್ತು ಜ್ಞಾನ ಇರುವ ತಜ್ಞರ ಅಗತ್ಯವಿದೆ. ಸುಪ್ರೀಂ ಕೋರ್ಟ್ ನೇಮಿಸಿರುವ ತಜ್ಞರ ಸಮಿತಿ ಜೊತೆಗೆ ಎನ್‌ಟಿಸಿಎ ಒಂದು ಹಂತದವರೆಗೆ ಆದರೂ ಕೆಲಸ ಮಾಡಬೇಕು’ ಎಂದು ಹೇಳಿದರು.
ಚೀತಾಗಳನ್ನು ದೇಶಕ್ಕೆ ಪರಿಚಯಿಸಲು ಕೇಂದ್ರ ಸರ್ಕಾರವು ವೈಜ್ಞಾನಿಕ ಕಾರ್ಯತಂತ್ರವನ್ನು ಈಗಾಗಲೇ ಸಿದ್ಧಪಡಿಸಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ಪೀಠಕ್ಕೆ ತಿಳಿಸಿದರು.
ಆಫ್ರಿಕಾದ ಚೀತಾಗಳನ್ನು ಭಾರತಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಮೂವರು ತಜ್ಞರ ಸಮಿತಿಯು ಎನ್‌ಟಿಸಿಎಗೆ ಮಾರ್ಗದರ್ಶನ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೇ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.