ನವದೆಹಲಿ: ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಡೋಸ್‌ಗಳ ಮಿಶ್ರಣ ಕುರಿತ ಅಧ್ಯಯನಕ್ಕೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ (ಡಿಸಿಜಿಐ) ಅನುಮೋದನೆ ದೊರೆತಿದೆ.
‘ತಮಿಳುನಾಡಿನ ವೆಲ್ಲೂರಿನ ಸಿಎಮ್‌ಸಿ ಆಸ್ಪತ್ರೆಗೆ ಲಸಿಕೆಗಳ ಡೋಸ್ ಮಿಶ್ರಣ ಕುರಿತು ಅಧ್ಯಯನಕ್ಕೆ ಅನುಮತಿ ನೀಡಲಾಗಿದೆ’ ಎಂದು ನೀತಿ ಆಯೋಗದ ಸದಸ್ಯಡಾ.ವಿ ಕೆ ಪೌಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕಳೆದ ತಿಂಗಳು, ಭಾರತದ ಕೇಂದ್ರೀಯ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು (ಸಿಡಿಎಸ್‌ಸಿಒ) ವೆಲ್ಲೂರು ಸಂಸ್ಥೆಗೆ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಮಿಶ್ರಣದ ವೈದ್ಯಕೀಯ ಪ್ರಯೋಗವನ್ನು ನಡೆಸಲು ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು.
ಸಮಿತಿಯು ಭಾರತ್ ಬಯೋಟೆಕ್ ತನ್ನ ಕೋವ್ಯಾಕ್ಸಿನ್ ಮತ್ತು ಪ್ರಯೋಗದ ಹಂತದಲ್ಲಿರುವ ಅಡೆನೊವೈರಲ್ ಇಂಟ್ರಾನಾಸಲ್ ಲಸಿಕೆ ಡೋಸ್ BBV154ನ ಪರಸ್ಪರ ಬದಲಾವಣೆ ಕುರಿತು ಅಧ್ಯಯನ ನಡೆಸಲು ಅನುಮೋದನೆ ನೀಡಲು ಶಿಫಾರಸು ಮಾಡಿತ್ತು, ಆದರೆ, ಅಧ್ಯಯನದ ಶೀರ್ಷಿಕೆಯಿಂದ ‘ಇಂಟರ್ಚೇಂಜೆಬಿಲಿಟಿ’ ಪದವನ್ನು ತೆಗೆದುಹಾಕುವಂತೆ ಹೈದರಾಬಾದ್ ಮೂಲದ ಸಂಸ್ಥೆಗೆ ಸೂಚಿಸಿದ್ದು, ಅನುಮೋದನೆಗಾಗಿ ಪರಿಷ್ಕೃತ ಪ್ರೋಟೊಕಾಲ್ ಅನ್ನು ಸಲ್ಲಿಸುವಂತೆ ತಿಳಿಸಿದೆ.
ಈ ಮೊದಲು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಧ್ಯಯನವು, ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಅನ್ನು ಕೋವಿಡ್ -19 ಲಸಿಕೆಗಳ ಮೊದಲ ಎರಡು ಡೋಸ್‌ಗಳಾಗಿ ಸಂಯೋಜಿಸುವುದರಿಂದ ಒಂದೇ ಲಸಿಕೆಯ ಎರಡು ಡೋಸ್‌ಗಳಿಗಿಂತ ‘ಉತ್ತಮ ಇಮ್ಯುನೊಜೆನಿಸಿಟಿ’ ಕಂಡುಬಂದಿದೆ ಎಂದು ಹೇಳಿತ್ತು.
ಆದರೆ, ವಿವಿಧ ಉತ್ಪಾದಕರಿಂದ ಪಡೆದ ಕೋವಿಡ್ -19 ಲಸಿಕೆಗಳನ್ನು ಬೆರೆಸುವುದರಿಂದ ಆಗುವ ಆರೋಗ್ಯದ ಪರಿಣಾಮದ ಬಗ್ಗೆ ಹೆಚ್ಚಿನ ಡೇಟಾ ಬೇಕಾಗಿರುವುದರಿಂದ ಇದು ‘ಅಪಾಯಕಾರಿ ಪ್ರವೃತ್ತಿ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.