ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವಿಚಾರವನ್ನು ಸ್ವಯಂ ಪ್ರೇರಿತವಾಗಿ ಗಣನೆಗೆ ತೆಗೆದುಕೊಂಡಿರುವ ದೆಹಲಿ ಮಹಿಳಾ ಆಯೋಗವು (ಡಿಸಿಡಬ್ಲ್ಯು), ಈ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಶುಕ್ರವಾರ ನೋಟಿಸ್ ನೀಡಿದೆ.
ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಆಧರಿಸಿ ಡಿಸಿಡಬ್ಲ್ಯುವರದಿ ಕೇಳಿದೆ ಎಂದು ಮೂಲಗಳು ತಿಳಿಸಿವೆ.
‘ಡೀಪ್‌ಫೇಕ್ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ಬಗ್ಗೆ ರಶ್ಮಿಕಾ ಅವರೇ ಕಳವಳ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ಪ್ರಕರಣವಾಗಿದ್ದರೂ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಎಫ್‌ಐಆರ್‌ನ ಪ್ರತಿ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಿರುವ ಡಿಸಿಡಬ್ಲ್ಯು, ಇದೇ 17ರೊಳಗೆ ಆರೋಪಿಗಳ ಮಾಹಿತಿ ಮತ್ತು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸಬೇಕು ಎಂದು ಹೇಳಿದೆ.
‘ಕೃತಕ ಬುದ್ಧಿಮತ್ತೆ (ಎ.ಐ) ಬಳಸಿ ನಟಿಯ ಡೀಪ್‌ಫೇಕ್ ವಿಡಿಯೊ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಡಿಸಿಡಬ್ಲ್ಯು ಅಧ್ಯಕ್ಷೆ ಸ್ವಾತಿ ಮಳಿವಾಲ್ ‘ಎಕ್ಸ್’ ವೇದಿಕೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.