ಲಖನೌ: ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿದ್ದು ಈಗ ನಿವೃತ್ತಿಯಾಗಿರುವ ಅಚ್ಚನ್ ಮಿಯಾನ್ ಅವರಿಗೆ 29 ವರ್ಷದ ಹಿಂದೆ ತಾನು ನಡೆಸಿದ್ದ ಅಪಘಾತದಲ್ಲಿ ಮೃತಪಟ್ಟಿದ್ದ ಎಮ್ಮೆ, ನಿವೃತ್ತಿಯ ಎರಡು ದಶಕದ ನಂತರ ‘ಕಾಡಲಾರಂಭಿಸಿದೆ’.
ಬಾರಾಬಂಕಿ ಜಿಲ್ಲೆಯ ನಿವಾಸಿಯಾಗಿರುವ 83 ವರ್ಷದ ಮಿಯಾನ್ ಅವರಿಗೆ, ಎಮ್ಮೆಯ ಸಾವಿಗೆ ಕಾರಣವಾಗಿದ್ದ ಅಪಘಾತಕ್ಕೆ ಸಂಬಂಧಿದಂತೆ ಈಗ ಕೋರ್ಟ್ ಸಮನ್ಸ್ ತಲುಪಿದೆ. ಸಮನ್ಸ್ ಪಡೆದಿರುವ ಅವರೀಗ ದಿಗ್ಮೂಢರಾಗಿದ್ದಾರೆ.
‘ಇದು ಎಮ್ಮೆ ಮೃತಪಟ್ಟಿದ್ದ ಪ್ರಕರಣದ ಸಮನ್ಸ್. ಬರೇಲಿ ಕೋರ್ಟ್‌ಗೆ ವಿಚಾರಣೆಗೆ ಹಾಜರಾಗಬೇಕು. ಹಾಜರಾಗಲು ವಿಫಲರಾದರೆ ನಿಮ್ಮನ್ನು ಬಂಧಿಸಬೇಕಾದೀತು’ ಎಂದು ಸಮನ್ಸ್ ನೀಡಿದ ಪೊಲೀಸರು ತಿಳಿಸಿದ್ದಾರೆ.
83 ವರ್ಷದ ಮಿಯಾನ್ ಅವರೀಗ ಪಾರ್ಶ್ವವಾಯು ಪೀಡಿತರು. ಸೊಂಟದ ಭಾಗದಲ್ಲಿ ಪಾರ್ಶ್ವವಾಯು ಪೀಡಿತರಾಗಿದ್ದು, ಸರಿಯಾಗಿ ನಡೆಯಲು ಅಶಕ್ತರಾಗಿದ್ದಾರೆ. ಈಗ ಏನು ಮಾಡಬೇಕು ಎಂದು ತಿಳಿಯದೇ ಕಣ್ಣೀರಿಟ್ಟಿದ್ದಾರೆ.
1994ರಲ್ಲಿ ಅಪಘಾತ ಸಂಭವಿಸಿತ್ತು. ಬ್ರೇಕ್ ವೈಫಲ್ಯದಿಂದ ಎಮ್ಮೆಕಟ್ಟಿದ್ದ ಗಾಡಿಗೆ ಬಸ್ಸು ಡಿಕ್ಕಿ ಹೊಡೆದಿತ್ತು. ಬಳಿಕ ಎಮ್ಮೆ ಸತ್ತಿತ್ತು. ನಾನೇ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಫರೀದ್‌ಪುರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದೂ ಮಿಯಾನ್ ಸ್ಮರಿಸಿದರು.
‘ಆ ನಂತರ ಈ ಪ್ರಕರಣದಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ. ಬಹುಶಃ ಪ್ರಕರಣವನ್ನು ಕೈಬಿಟ್ಟಿರಬೇಕು ಎಂದು ಭಾವಿಸಿದ್ದೆ. ಈಗ ಈ ವಯಸ್ಸಿನಲ್ಲಿ ಹೇಗೆ ಕಾನೂನು ಹೋರಾಟ ನಡೆಸಬೇಕು ಎಂಬುದೇ ನನಗೆ ತಿಳಿಯುತ್ತಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ.
ಕೋರ್ಟ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ, ಪ್ರಕರಣ ಇತ್ಯರ್ಥವಾಗುವುದು ದಶಕಗಳಷ್ಟು ವಿಳಂಬವಾದರೆ ಜನಸಾಮಾನ್ಯರಿಗೆ ಹೇಗೆ ಸಮಸ್ಯೆಯಾಗುತ್ತದೆ ಎಂಬುದಕ್ಕೆ ಈ ಪ್ರಕರಣ ನಿದರ್ಶನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.