ADVERTISEMENT

ಮೃತಪಟ್ಟಿದ್ದಾನೆಂದುಕೊಳ್ಳಲಾಗಿದ್ದ ವ್ಯಕ್ತಿ ಅಂತ್ಯಸಂಸ್ಕಾರದ ಸಿದ್ಧತೆ ವೇಳೆ ಬಂದ!

ಪಿಟಿಐ
Published 25 ಜೂನ್ 2024, 11:44 IST
Last Updated 25 ಜೂನ್ 2024, 11:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್: ರೈಲ್ವೆ ಹಳಿಯಲ್ಲಿ ಸಿಕ್ಕ ಮೃತದೇಹವನ್ನು ಕುಟುಂಬ ಸದಸ್ಯರು ತಪ್ಪಾಗಿ ಗುರುತಿಸಿದ ಹಿನ್ನೆಲೆಯಲ್ಲಿ ತೆಲಂಗಾಣದ ವಿಕಾರಾಬಾದ್‌ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಯಾಗಿದೆ.

ತಮ್ಮ ಮನೆಯ ವ್ಯಕ್ತಿಯ ಮೃತದೇಹವೆಂದು ತಿಳಿದು, ಬಂಧು ಬಾಂಧವರಿಗೆಲ್ಲ ಮಾಹಿತಿ ನೀಡಿದ್ದ ಮನೆಯ ಸದಸ್ಯರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದ ವೇಳೆ ಆ ವ್ಯಕ್ತಿ ಮನೆಗೆ ಬಂದಿದ್ದಾನೆ.

ವಿಕಾರಾಬಾದ್ ಜಿಲ್ಲೆಯ ಬಷೀರಾಬಾದ್ ಮಂಡಲದ ನವಂದಗಿಯಲ್ಲಿ ಈ ಘಟನೆ ನಡೆದಿದೆ.

ADVERTISEMENT

40 ವರ್ಷದ ಕೂಲಿ ಕಾರ್ಮಿಕ ಯಲ್ಲಪ್ಪ ಮೃತಪಟ್ಟಿದ್ದಾನೆ ಎಂದುಕೊಂಡು ಅವರ ಕುಟುಂಸ್ಥರು ಸಂಬಂಧಿಕರಿಗೆಲ್ಲ ಅಂತ್ಯಸಂಸ್ಕಾರಕ್ಕೆ ಬರುವಂತೆ ತಿಳಿಸಿದ್ದರು.

ಘಟನೆ ಹಿನ್ನೆಲೆ

ಜೂನ್ 22ರಂದು ವಿಕಾರಾಬಾದ್ ರೈಲ್ವೆ ನಿಲ್ದಾಣ ಬಳಿಯ ಹಳಿ ಮೇಲೆ ಅಪರಿಚಿತ ವ್ಯಕ್ತಿಯ ಶವವನ್ನು ರೈಲ್ವೆ ಪೊಲೀಸರು ಪತ್ತೆ ಮಾಡಿದ್ದರು. ಮೃತದೇಹದ ಜೊತೆ ಒಂದು ಮೊಬೈಲ್ ಸಹ ಸಿಕ್ಕಿತ್ತು. ಫೋನ್ ತೆಗೆದುಕೊಂಡು ಅದರಲ್ಲಿದ್ದ ಒಂದು ಸಂಖ್ಯೆಗೆ ಪೊಲೀಸರು ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಮನೆಯ ಸದಸ್ಯರು ಅದು ಯಲ್ಲಪ್ಪನವರ ಮೊಬೈಲ್ ಎಂದು ತಿಳಿಸಿದ್ದಾರೆ.

ಮೃತದೇಹ ಇಡಲಾಗಿದ್ದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಯಲ್ಲಪ್ಪನ ಪತ್ನಿ ಮತ್ತು ಅವರ ಕುಟುಂಬ ಸದಸ್ಯರು ಅದು ಯಲ್ಲಪ್ಪನದ್ದೇ ಮೃತದೇಹ ಎಂದು ಗುರುತಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹದ ಅಂತ್ಯಸಂಸ್ಕಾರಕ್ಕೆ ಯಲ್ಲಪ್ಪನ ಕುಟುಂಬ ಎಲ್ಲ ಸಿದ್ಧತೆ ನಡೆಸಿತ್ತು. ಈ ನಡುವೆ ಯಲ್ಲಪ್ಪನನ್ನು ಜೀವಂತವಾಗಿ ತಂಡೂರು ಪಟ್ಟಣದಲ್ಲಿ ನೋಡಿದ್ದಾಗಿ ಕೆಲವರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಯಲ್ಲಪ್ಪ ಸಹ ಮನೆಗೆ ಹಿಂದಿರುಗಿದ್ದು, ಕುಟುಂಬ ಸದಸ್ಯರು ಅಚ್ಚರಿಗೊಂಡಿದ್ದಾರೆ.

ಕೂಡಲೇ ಈ ವಿಷಯವನ್ನು ರೈಲ್ವೆ ಪೊಲಿಸರಿಗೆ ತಿಳಿಸಲಾಗಿದ್ದು, ಅಪರಿಚಿತ ಮೃತದೇಹವನ್ನು ವಾಪಸ್ ಸಾರ್ವಜನಿಕ ಆಸ್ಪತ್ರೆಗೆ ಶವಾಗಾರಕ್ಕೆ ರವಾನಿಸಲಾಗಿದೆ.

ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟಿದ್ದಾನೆ. ಮೃತದೇಹದ ಬಳಿ ಯಲ್ಲಪ್ಪನ ಮೊಬೈಲ್ ಪತ್ತೆಯಾದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.