ಗುವಾಹಟಿ / ಇಂಫಾಲ್ : ‘ಮಣಿಪುರದ ನೋನಿ ಜಿಲ್ಲೆಯಲ್ಲಿ ರೈಲ್ವೆ ಕಾಮಗಾರಿ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಭಾನುವಾರ ಮತ್ತೆ ಮೂರು ಮೃತ ದೇಹಗಳು ಪತ್ತೆಯಾಗುವ ಮೂಲಕ ಸಾವಿಗೀಡಾದವರ ಸಂಖ್ಯೆ 37 ಕ್ಕೆ ಏರಿಕೆಯಾಗಿದೆ. ಕಾಣೆಯಾದ ಇನ್ನೂ 25 ಮಂದಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಶನಿವಾರ ರಾತ್ರಿಯಿಂದ ತುಪುಲ್ ಪ್ರದೇಶದಲ್ಲಿ ಭಾರಿ ಮಳೆ ಹಾಗೂ ಪದೇ ಪದೇ ಸಂಭವಿಸುತ್ತಿರುವ ಭೂಕುಸಿತಗಳು ಶೋಧ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿವೆ’ ಎಂದು ಅವರು ಹೇಳಿದರು.
‘ಅವಶೇಷಗಳಡಿಯಲ್ಲಿ ಇದುವರೆಗೆ 37 ಜನರ ಮೃತದೇಹಗಳು ಪತ್ತೆಯಾಗಿವೆ.ಅವರಲ್ಲಿ 24 ಮಂದಿ ಪ್ರಾದೇಶಿಕ ಸೇನಾ ಸಿಬ್ಬಂದಿ ಮತ್ತು 13 ಮಂದಿ ನಾಗರಿಕರು ಇದ್ದಾರೆ.ಕಾಣೆಯಾದ ಉಳಿದ ಆರು ಪ್ರಾದೇಶಿಕ ಸೇನಾ ಸಿಬ್ಬಂದಿ ಮತ್ತು 19 ನಾಗರಿಕರನ್ನು ಹುಡುಕಲು ಪ್ರಯತ್ನಿಸಲಾಗುತ್ತಿದೆ. ಕೊನೆಯ ವ್ಯಕ್ತಿಯನ್ನು ಕಂಡುಹಿಡಿಯುವವರೆಗೆ ಶೋದ ಕಾರ್ಯಾಚರಣೆ ಮುಂದುವರಿಯುತ್ತದೆ’ಎಂದು ಗುವಾಹಟಿಯ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
‘ಭಾರೀ ಮಳೆ, ಹೊಸ ಭೂಕುಸಿತ ಹಾಗೂ ಪ್ರತಿಕೂಲ ಹವಾಮಾನದ ಹೊರತಾಗಿಯೂ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಇಲ್ಲಿಯವರೆಗೆ 13 ಪ್ರಾದೇಶಿಕ ಸೇನಾ ಸಿಬ್ಬಂದಿ ಹಾಗೂ ಐದು ಮಂದಿ ನಾಗರಿಕರನ್ನು ರಕ್ಷಣೆ ಮಾಡಲಾಗಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.