ಮುಜಾಫರ್‌ಪುರ(ಬಿಹಾರ):ಅಕ್ಯೂಟ್ ಎನ್ಸೆಫಾಲಿಟೆಸ್ ಸಿಂಡ್ರೊಮ್ (ಎಇಎಸ್) ಬಾಧಿಸಿ ಬಿಹಾರದ ಮುಜಾಫರ್ ಪುರದಲ್ಲಿ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟ ಮಕ್ಕಳ ಸಂಖ್ಯೆ 131ಕ್ಕೆ ಏರಿದೆ.
ಮಂಗಳವಾರದ ವರದಿಯಂತೆ ಎಸ್‌ಕೆಎಂಸಿ ಆಸ್ಪತ್ರೆಯಲ್ಲಿ 111 ಮಕ್ಕಳು, ಕೇಜ್ರಿವಾಲ್ ಆಸ್ಪತ್ರೆಯಲ್ಲಿ 20 ಮಕ್ಕಳು ಮೃತಪಟ್ಟಿದ್ದಾರೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.
ಆರೋಗ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ವೈದ್ಯರು ತ್ವರಿತವಾಗಿ ಈ ಸಾವು ನೋವುಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶ ನೀಡಿದ್ದರು. ಅಲ್ಲದೆ, ಸರ್ಕಾರದಿಂದ ಯಾವ ಸಹಾಯಬೇಕು ಅದನ್ನು ಕೇಳುವಂತೆಯೂ ತಿಳಿಸಿದ್ದರು. ಹೆಚ್ಚಿನ ನಿಗಾ ವಹಿಸುವಂತೆ ಎಲ್ಲಾ ಸೂಚನೆಗಳನ್ನು ನೀಡಿದ್ದರೂ, ಮಕ್ಕಳ ಸಾವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ದಿನೇ ದಿನೆ ಸಾವು ಹೆಚ್ಚುತ್ತಲೇ ಇವೆ.
ಏನಿದು ಎಇಎಸ್?
ಎಇಎಸ್ ಸೋಂಕು ತಗುಲಿದ ಮಕ್ಕಳಲ್ಲಿ ಮೊದಲು ಅತಿಯಾದ ಜ್ವರ, ಸ್ನಾಯು ಸೆಳೆತ ಹಾಗೂ ತಲೆ ನೋವು ಕಾಣಿಸಿಕೊಳ್ಳುತ್ತದೆ. ಊಟ ಮಾಡದೆ ರಾತ್ರಿ ಮಲಗುವುದು, ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಆರಂಭದಲ್ಲಿ ಲಿಚ್ಚಿ ಎಂಬ ಹಣ್ಣು ತಿನ್ನುವುದರಿಂದ ಮಕ್ಕಳಲ್ಲಿ ಈ ಸೋಂಕು ಬಂದಿದೆ ಎಂದು ಹೇಳಲಾಗಿತ್ತು. ಆದರೆ, ವೈದ್ಯಾಧಿಕಾರಿಗಳ ತಪಾಸಣೆಯಿಂದ ಈ ಸೋಂಕು ಹಣ್ಣಿನಿಂದ ಬಂದಿಲ್ಲ ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ಮುಜಾಫರ್‌ಪುರ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 111 ಮಕ್ಕಳು ಹಾಗೂ ಕೇಜ್ರಿವಾಲ್ ಆಸ್ಪತ್ರೆಯಲ್ಲಿ 20 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.