ಮೊರೆನಾ: ಮಧ್ಯಪ್ರದೇಶದ ಚಂಬಲ್ ನದಿ ದಾಟುತ್ತಿದ್ದಾಗ ಮೊಸಳೆ ಬಂತು ಮೊಸಳೆ ಎಂಬ ವದಂತಿಯಿಂದ ನದಿಯಲ್ಲಿ ಮುಳುಗಿ ಐವರು ಮಹಿಳೆಯರು ಮೃತಪಟ್ಟು, ಇಬ್ಬರು ಬಾಲಕರು ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ 17 ಜನರಿದ್ದ ತಂಡ 350 ಕಿಮೀ ದೂರದಲ್ಲಿರುವ ರಾಜಸ್ತಾನದ ಕರೌಲಿ ಜಿಲ್ಲೆಯ ಕೈಲಾ ದೇವಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ಭಕ್ತಾಧಿಗಳು ಮೊರೆನಾ ಜಿಲ್ಲೆಗೆ ವಾಹನದಲ್ಲಿ ಬಂದು ಅಲ್ಲಿಂದ ಪಾದಯಾತ್ರೆ ಮೂಲಕ ಚಂಬಲ್ ನದಿ ದಾಟಿ ಹೋಗುವಾಗ ಶನಿವಾರ ಸಂಜೆ ದುರ್ಘಟನೆ ನಡೆದಿದೆ.
ನೀರಿನಲ್ಲಿ ಕಾಣೆಯಾಗಿದ್ದ ಐವರು ಮಹಿಳೆಯರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಇನ್ನಿಬ್ಬರು ಬಾಲಕರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹತ್ತು ಜನರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಧರ್ಮೇಂದ್ರ ಮಾಳವೀಯಾ ಪಿಟಿಐಗೆ ತಿಳಿಸಿದ್ದಾರೆ.
17 ಜನರಿದ್ದ ತಂಡ ಗುಂಪು ಗುಂಪಾಗಿ ಚಂಬಲ ನದಿ ದಾಟುತ್ತಿತ್ತು. ಈ ವೇಳೆ ಗುಂಪಿನಲ್ಲಿ ಯಾರೋ ಒಬ್ಬರು ಮೊಸಳೆ ಬಂತು ಮೊಸಳೆ ಬಂತು ಎಂದು ವದಂತಿ ಎಬ್ಬಿಸಿದಾಗ ಮಹಿಳೆಯರು ಮಕ್ಕಳು ದಿಕ್ಕಾಪಾಲಾಗಿ, ನೀರಿನ ಸೆಳೆತ ಹೆಚ್ಚಿದ್ದ ಕಡೆ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಘಟನೆ ನಡೆದ ಕೆಲ ಹೊತ್ತಿನ ಬಳಿಕ, ‘ಚಂಬಲ್ ನದಿಯಲ್ಲಿ 8ಕ್ಕೂ ಹೆಚ್ಚು ಜನರನ್ನು ಮೊಸಳೆಗಳು ತಿಂದು ಹಾಕಿವೆ’ ಎಂದು ಸುದ್ದಿ ಹಬ್ಬಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮೊಸಳೆ ದಾಳಿಯಾಗಿರುವ ಕುರುಹು ಸಿಕ್ಕಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರು ಶಿವಪುರಿ ಜಿಲ್ಲೆಯ ಚಿಲವಾಡ ಗ್ರಾಮದವರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.