ಕಠ್ಮಂಡು: ನೇಪಾಳದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 88ಕ್ಕೆ ಏರಿದೆ. ಗುರುವಾರ ಒಂದೇ ದಿನ ದೇಶದ ವಿವಿಧೆಡೆ 11 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವಾಲಯದ ವಿಪತ್ತು ನಿರ್ವಹಣಾ ವಿಭಾಗವು ಪ್ರಕಟಿಸಿದ ಇತ್ತೀಚಿನ ಮಾಹಿತಿಯ ಪ್ರಕಾರ, ಈವರೆಗೆ ಮಳೆ ಸಂಬಂಧ ಅವಘಡಗಳಲ್ಲಿ 30 ಜನರು ನಾಪತ್ತೆಯಾಗಿದ್ದಾರೆ.
ಪೂರ್ವ ನೇಪಾಳದ ಪಂಚತಾರ್ ಜಿಲ್ಲೆಯಲ್ಲಿ ಅತಿ ಹೆಚ್ಚು 27 ಮಂದಿ ಸಾವನ್ನಪ್ಪಿದರೆ, ಇಲಂ ಮತ್ತು ದೋತಿ ಜಿಲ್ಲೆಗಳಲ್ಲಿ ತಲಾ 13 ಮಂದಿ ಮೃತಪಟ್ಟಿದ್ದಾರೆ. ಕಲಿಕೋಟ್, ಬೈತಾಡಿ, ದಡೆಲ್ಧುರ, ಬಜಾಂಗ್, ಹುಮ್ಲಾ, ಸೋಲುಖುಂಬು, ಪ್ಯುಥಾನ್, ಧಂಕುಟ, ಮೊರಾಂಗ್, ಸುನ್ಸಾರಿ ಮತ್ತು ಉದಯಪುರ ಸೇರಿ ಇತರ 15 ಜಿಲ್ಲೆಗಳಲ್ಲೂ ಸಾವು ಸಂಭವಿಸಿವೆ.
ಲಿಮಿ ಪ್ರದೇಶದಲ್ಲಿ ಭಾರಿ ಹಿಮಪಾತದಿಂದಾಗಿ ನಾಲ್ವರು ಸ್ಲೊವೇನಿಯನ್ ಪ್ರವಾಸಿಗರು ಮತ್ತು ಮೂವರು ಗೈಡ್‌ಗಳು ಸೇರಿ 12 ಮಂದಿ ಕಠ್ಮಂಡುವಿನ ಹುಮ್ಲಾ ಜಿಲ್ಲೆಯ ನಖ್ಲಾದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹುಮ್ಲಾ ಮುಖ್ಯ ಜಿಲ್ಲಾ ಅಧಿಕಾರಿ ಗಣೇಶ್ ಆಚಾರ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.