ನವದೆಹಲಿ: ಭಾರತದಲ್ಲಿ ವಾಯು ಮಾಲಿನ್ಯದಿಂದ ಉಂಟಾಗುವ ಸಾವಿನ ಪ್ರಮಾಣವು ಕಳೆದ ಎರಡು ದಶಕಗಳಲ್ಲಿ 2.5 ಪಟ್ಟು ಹೆಚ್ಚಾಗಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರದ (ಸಿಎಸ್‌ಇ) ಹೊಸ ಅಧ್ಯಯನ ವರದಿ ಹೇಳಿದೆ.
ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಸಿಎಸ್‌ಇ ಅಧ್ಯಯನ ನಡೆಸಿದ 2019ರ ಪರಿಸರ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದರು.
ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಮಾಲಿನ್ಯದ ಮಾಪನ ಪಿ.ಎಂ 2.5 ಇದ್ದು, ಇದು ಎರಡು ದಶಕಗಳಲ್ಲಿ ಎರಡೂವರೆ ಪಟ್ಟು ಹೆಚ್ಚಾಗಿದೆ. ಭಾರತದಲ್ಲಿ ಸಂಭವಿಸುವ ಪ್ರತಿ ನಾಲ್ಕು ಸಾವುಗಳಲ್ಲಿ ವಾಯುಮಾಲಿನ್ಯದಿಂದ ಒಂದು ಸಾವು ಸಂಭವಿಸುತ್ತಿದೆ ಎಂದು ವರದಿ ಹೇಳಿದೆ.
ಜಗತ್ತಿನಲ್ಲಿ ವಾಯು ಮಾಲಿನ್ಯದಿಂದ 66.70 ಲಕ್ಷ ಜನರು ಸಾವನ್ನಪ್ಪಿದ್ದು, ಅದರಲ್ಲಿ ಭಾರತದಲ್ಲಿ 16.7 ಲಕ್ಷ ಮತ್ತು ಚೀನಾದಲ್ಲಿ 18.5 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ವಾಯು ಮಾಲಿನ್ಯದಿಂದ ಜಗತ್ತಿನಲ್ಲಿ 2019ರಲ್ಲಿ 4.76 ಲಕ್ಷ ಶಿಶುಗಳು ಜನಿಸಿದ ಮೊದಲ ತಿಂಗಳಿನಲ್ಲಿಯೇ ಸಾವನ್ನಪ್ಪಿವೆ. ಇವುಗಳಲ್ಲಿ 1.16 ಸಾವು ಭಾರತದಲ್ಲಿ ಸಂಭವಿಸಿವೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.