ನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಮೇಲೆ ಬುಧವಾರ ಹೊಸ ಸಂಸತ್‌ನಲ್ಲಿ ಕಾವೇರಿದ ಚರ್ಚೆ ನಡೆಯಿತು.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಡಿಎಂಕೆ ಸಂಸದೆ ಕನಿಮೊಳಿ ಮತ್ತು ಎನ್‌ಸಿಪಿಯ ಸುಪ್ರಿಯಾ ಸುಳೆ ಅವರು ‘ಮಹಿಳೆಯರನ್ನು ಗೌರವಿಸುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ವಾಗ್ದಾಳಿ ನಡೆಸಿದರೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ, ‘ಮಹಿಳೆಯರು ಮುಖ್ಯ ಎಂದು ಸರ್ಕಾರ ಪರಿಗಣಿಸಿದೆ’ ಎಂದು ತಿರುಗೇಟು ನೀಡಿದರು.
ಹೊಸ ಜನಗಣತಿ ಮತ್ತು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ನಂತರವೇ ಮೀಸಲಾತಿ ಪರಿಚಯಿಸಲಾಗುತ್ತದೆ ಎಂಬ ಹಿನ್ನಲೆಯಲ್ಲಿ ಸೋನಿಯಾ ಗಾಂಧಿ ಅವರು, ‘ಭಾರತೀಯ ಮಹಿಳೆಯರು ಕಳೆದ 13 ವರ್ಷಗಳಿಂದ ತಮ್ಮ ರಾಜಕೀಯ ಜವಾಬ್ದಾರಿಗಾಗಿ ಕಾಯುತ್ತಿದ್ದಾರೆ. ಈಗ ಅವರು ಇನ್ನೂ ಕೆಲ ವರ್ಷಗಳ ಕಾಲ ಕಾಯುವಂತೆ ಹೇಳಲಾಗುತ್ತಿದೆ. ಎಷ್ಟು ವರ್ಷಗಳು? ಎರಡು ವರ್ಷ, ನಾಲ್ಕು ವರ್ಷ , ಆರು ವರ್ಷ, ಎಂಟು ವರ್ಷಗಳು? ಭಾರತೀಯ ಮಹಿಳೆಯರನ್ನು ಈ ರೀತಿ ನಡೆಸಿಕೊಳ್ಳುವುದೇ ಸೂಕ್ತವೇ? ಎಂದು ಪ್ರಶ್ನಿಸಿದ್ದಾರೆ.
‘ಈ ಮಸೂದೆಯನ್ನು ತಕ್ಷಣ ಜಾರಿಗೆ ತರಬೇಕು ಹಾಗೂ ಇದರೊಂದಿಗೆ ಜಾತಿ ಗಣತಿಗೂ ಒತ್ತಾಯಿಸುತ್ತೇವೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಮಹಿಳೆಯರಿಗೆ ಮೀಸಲಾತಿ ನೀಡಲು ಅವಕಾಶ ಕೇಳುತ್ತೇವೆ. ಇದನ್ನು ನನಸಾಗಿಸಲು ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಹೇಳಿದ್ದಾರೆ.
ಮಸೂದೆಯನ್ನು ‘ಜುಮ್ಲಾ’ (ಸುಳ್ಳು ಭರವಸೆ) ಎಂದು ಬಣ್ಣಿಸಿರುವ ಇತರ ವಿರೋಧ ಪಕ್ಷಗಳ ಸಂಸದರು, ಮಸೂದೆಯನ್ನು ತಕ್ಷಣ ಜಾರಿಗೆ ತರಲು ಸಾಧ್ಯವಾಗದಿದ್ದಾಗ ವಿಶೇಷ ಅಧಿವೇಶನ ಕರೆಯುವ ಅಗತ್ಯವಿತ್ತೆ ಎಂದು ಪ್ರಶ್ನಿಸಿದ್ದಾರೆ.
‘ಬಿಜೆಪಿಯ 303 ಲೋಕಸಭಾ ಮತ್ತು 93 ರಾಜ್ಯಸಭಾ ಸಂಸದರಿಗೆ ಬಹಿರಂಗ ಸವಾಲು– ಜಾತಿ ಜನಗಣತಿಗಾಗಿ ಸೋನಿಯಾ ಬೇಡಿಕೆ ಬೆಂಬಲಿಸುತ್ತೀರಾ? ಒಂದೇ ಒಂದು ಭಾಷಣದಲ್ಲಿಯೂ ಅದರ ಉಲ್ಲೇಖ ಕಂಡುಬರುತ್ತದೆಯೇ? ಸಂಸತ್ತಿನಲ್ಲಿ ಒಬಿಸಿ ಮಹಿಳೆಯರ ಪ್ರಾತಿನಿಧ್ಯ ಖಚಿತಪಡಿಸಿಕೊಳ್ಳಲು ನೀವು ಹೇಗೆ ಯೋಜಿಸುತ್ತೀರಿ? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಹಿಳಾ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಮಸೂದೆಯ ಮೊದಲ ಭಾಷಣಕಾರರಾಗಿ ಬಿಜೆಪಿಯ ನಿಶಿಕಾಂತ್ ದುಬೆ ಅವರನ್ನು ಸರ್ಕಾರ ಆಯ್ಕೆ ಮಾಡಿದೆ. ಮಹಿಳೆಯರ ಸಮಸ್ಯೆಗಳ ಬಗ್ಗೆ ಪುರುಷರು ಮಾತನಾಡಲು ಸಾಧ್ಯವಿಲ್ಲವೇ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ.
‘ನಾರಿ ಶಕ್ತಿ ವಂದನ್ ಅಧಿನಿಯಂ’ ಬೆಂಬಲಿಸಲು ಇಲ್ಲಿ ನಿಂತಿದ್ದೇನೆ. ಅಡುಗೆ ಮನೆಯಿಂದ ಕ್ರೀಡಾಂಗಣದವರೆಗೆ ಭಾರತೀಯ ಮಹಿಳೆಯ ಪ್ರಯಾಣ ಸುದೀರ್ಘವಾಗಿದೆ.-ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕಿ
ಸರ್ಕಾರ (ಮತ್ತು ಸಮಾಜ) ಮಹಿಳೆಯರಿಗೆ ನಮಸ್ಕಾರ ಮಾಡುವುದು ಹಾಗೂ ಪೂಜಿಸುವುದನ್ನು ನಿಲ್ಲಿಸಿ, ಸಮಾನ ಅವಕಾಶ ನೀಡಬೇಕು. ನಮ್ಮನ್ನು ತಾಯಿ, ಸಹೋದರಿ ಅಥವಾ ಹೆಂಡತಿ ಎನ್ನುವುದು ಇಷ್ಟವಿಲ್ಲ. ಸಮಾನವಾಗಿ ಗೌರವಿಸಬೇಕೆಂದು ಬಯಸುತ್ತೇವೆ.-ಕನಿಮೊಳಿ, ಡಿಎಂಕೆ ಸಂಸದೆ
ನಾವು ಸಂವಿಧಾನವನ್ನು ಉಲ್ಲಂಘಿಸಬೇಕೆಂದು ಅವರು (ಪ್ರತಿಪಕ್ಷಗಳು) ಬಯಸುತ್ತಾರೆಯೇ? ಧರ್ಮಾಧಾರಿತ ಕೋಟಾ ಕೇಳುವ ಮೂಲಕ ಕಾಂಗ್ರೆಸ್ ದೇಶವನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ.-ಸ್ಮೃತಿ ಇರಾನಿ, ಕೇಂದ್ರ ಸಚಿವೆ
ಜನಗಣತಿ, ಕ್ಷೇತ್ರಮರುವಿಂಗಡಣೆ ಆರಂಭಿಸಲು ದಿನಾಂಕವನ್ನು ನಿಗದಿಪಡಿಸಿಲ್ಲ. ಹೀಗಾಗಿ ಶೇ 33ರಷ್ಟು ಮಹಿಳಾ ಸಂಸದರು ಲೋಕಸಭೆಯಲ್ಲಿ ಯಾವಾಗ ಕುಳಿತುಕೊಳ್ಳುತ್ತಾರೆ ಎಂಬುದಕ್ಕೆ ಖಚಿತತೆ ಇಲ್ಲ-ಮಹುವಾ ಮೋಯಿತ್ರಾ, ಟಿಎಂಸಿ ಸಂಸದೆ
ಯಾರು ಏನೆಂದರು?
* ಮಹಿಳಾ ಮೀಸಲಾತಿ ಮಸೂದೆಯು ಚುನಾವಣಾ ಗಿಮಿಕ್. ಏಕೆಂದರೆ ಹೊಸ ಜನಗಣತಿ ಮತ್ತು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯ ನಂತರವೇ ಮೀಸಲಾತಿ ಪರಿಚಯಿಸಲಾಗುವುದು ಎಂದು ಮಸೂದೆ ಹೇಳುತ್ತದೆ ಎಂಬುದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅನಿಸಿಕೆ
*ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ ನಂತರ ತನ್ನದೇ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಬಿಜೆಪಿ ಏಕೆ ಕ್ರಮ ಕೈಗೊಂಡಿಲ್ಲ? ಟಿಎಂಸಿ ಸಂಸದರಲ್ಲಿ ಶೇಕಡ 40 ಕ್ಕಿಂತ ಹೆಚ್ಚು ಮಹಿಳೆಯರು ಇದ್ದಾರೆ. ಪ್ರತಿಯೊಬ್ಬರು ಮಹಿಳೆಯರಿಗೆ ಗೌರವ ನೀಡಬೇಕು ಎಂದು ಟಿಎಂಸಿ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಹೇಳಿದರು.
* ಮಹಿಳಾ ಮೀಸಲು ಮಸೂದೆಯನ್ನು ಬೆಂಬಲಿಸುತ್ತೇವೆ. ಆದರೆ ಇದು ಸುಳ್ಳು ಭರವಸೆ ಹೊರತು ಪಡಿಸಿ ಬೇರೇನೂ ಅಲ್ಲ. 2024ರ ಲೋಕಸಭೆ ಚುನಾವಣೆ ಬಗ್ಗೆ ಬಿಜೆಪಿಗೆ ಭಯವಾಗಿದೆ. ಅದಕ್ಕಾಗಿಯೇ ಈ ಮಸೂದೆ ಪರಿಚಯಿಸಲಾಗಿದೆ– ಇದು ಜೆಡಿಯು ನಾಯಕ ರಾಜೀವ್ ರಂಜನ್ ಸಿಂಗ್ ಅಭಿಪ್ರಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.