ADVERTISEMENT

ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಭರವಸೆ: ಕಾಂಗ್ರೆಸ್‌ ಚಿಂತನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 1:43 IST
Last Updated 3 ಮಾರ್ಚ್ 2019, 1:43 IST
   

ನವದೆಹಲಿ: ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಸಂಪೂರ್ಣ ಕೃಷಿ ಸಾಲ ಮನ್ನಾದ ಭರವಸೆ ನೀಡುವ ಬಗ್ಗೆ ಕಾಂಗ್ರೆಸ್‌ ಚಿಂತನೆ ನಡೆಸಿದೆ.

ಈ ಮೂಲಕ ದೇಶದ ಪ್ರತಿಯೊಬ್ಬ ರೈತರಿಗೂ ಅನುಕೂಲವಾಗುವ ಅಂಶಗಳಿರುವ ಪ್ರಣಾಳಿಕೆ ರೂಪಿಸಲು ಯೋಚಿಸಲಾಗುತ್ತಿದೆ.

ಸಾಲ ಮನ್ನಾ ಭರವಸೆ ನೀಡಲು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಆಸಕ್ತಿ ವಹಿಸಿದ್ದಾರೆ. ಒಂದು ವೇಳೆ, ಕಾಂಗ್ರೆಸ್‌ ನೇತೃತ್ವದಲ್ಲಿ ಸರ್ಕಾರ ರಚನೆಯಾದರೆ ಸಾಲ ಮನ್ನಾಕ್ಕಾಗಿ ಸುಮಾರು ₹4 ಲಕ್ಷ ಕೋಟಿ ನೀಡಲು ಹಿಂಜರಿಯುವುದಿಲ್ಲ ಎಂದು ಮುಖಂಡರು ತಿಳಿಸಿದ್ದಾರೆ.

ADVERTISEMENT

ಮಧ್ಯಪ್ರದೇಶ, ಛತ್ತೀಸಗಡ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಸಾಲ ಮನ್ನಾ ಭರವಸೆಗೆ ಉತ್ತಮ ಫಲಿತಾಂಶ ದೊರೆಯಯಿತು. ಅಧಿಕಾರಕ್ಕೆ ಬಂದ ನಂತರ ಭರವಸೆಯಂತೆ ಸಾಲ ಮನ್ನಾ ಮಾಡುವ ಮೂಲಕ ರೈತರ ಕಲ್ಯಾಣಕ್ಕಾಗಿ ಕಾಂಗ್ರೆಸ್‌ ಪಕ್ಷ ಶ್ರಮಿಸುತ್ತಿದೆ ಎನ್ನುವುದನ್ನು ಸಾಬೀತು ಮಾಡಲಾಯಿತು. ಹೀಗಾಗಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದೇ ನೀತಿ ಅನುಸರಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಮುಖಂಡರು ತಿಳಿಸಿದ್ದಾರೆ.

ಆಹಾರ ಸಂಸ್ಕರಣಾ ಕೈಗಾರಿಕೆಗಳ ವಿಸ್ತರಣೆಯ ಬಗ್ಗೆಯೂ ಪ್ರಣಾಳಿಕೆಯಲ್ಲಿ ಸೇರಿಸಲಾಗುತ್ತಿದೆ. ಈ ಕೈಗಾರಿಕೆಗಳಿಂದ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚು ಆಯ್ಕೆಗಳು ದೊರೆಯುತ್ತವೆ. ಜತೆಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎನ್ನುವುದನ್ನು ಮತದಾರರಿಗೆ ಮನವರಿಕೆ ಮಾಡಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.