ADVERTISEMENT

ದೇಶದ ಎರಡನೇ ಅತಿ ದೊಡ್ಡ ಪ್ರವೇಶ ಪರೀಕ್ಷೆ ‘ಸಿಯುಇಟಿ–ಯುಜಿ’ ಇದೇ 15ರಿಂದ

14.9 ಲಕ್ಷ ವಿದ್ಯಾರ್ಥಿಗಳ ನೋಂದಣಿ * 510 ನಗರಗಳಲ್ಲಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 14:13 IST
Last Updated 14 ಜುಲೈ 2022, 14:13 IST
.
.   

ನವದೆಹಲಿ: ಕೇಂದ್ರೀಯ ವಿಶ್ವವಿದ್ಯಾಲಯಗಳೂ ಸೇರಿದಂತೆ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಶುಕ್ರವಾರದಿಂದ (ಇದೇ 15)ಆಗಸ್ಟ್‌ 20ರವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ–ಯುಜಿ) ನಡೆಯಲಿದೆ.

ದೇಶದ 500 ಮತ್ತು ವಿದೇಶದ 10 ನಗರಗಳಲ್ಲಿ ನಡೆಯುವ ಈ ಪರೀಕ್ಷೆಗೆ 14.9 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ದೇಶದ ಎರಡನೇ ಅತಿ ದೊಡ್ಡ ಪ್ರವೇಶ ಪರೀಕ್ಷೆ ಎನಿಸಿದೆ.

ವೈದ್ಯಕೀಯ ಪದವಿ ಪ್ರವೇಶಕ್ಕಾಗಿ ನಡೆಯುವ ‘ನೀಟ್‌–ಯುಜಿ’ ದೇಶದ ಅತಿ ದೊಡ್ಡ ಸಾಮಾನ್ಯ ಪ್ರವೇಶ ಪರೀಕ್ಷೆಯಾಗಿದ್ದು, ಆ ಪರೀಕ್ಷೆಗೆ ಸರಾಸರಿ 18 ಲಕ್ಷದಷ್ಟು ವಿದ್ಯಾರ್ಥಿಗಳು ಹೆಸರು ನೋಂದಾಯಿಸುತ್ತಾರೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್‌ ಪದವಿ ಪ್ರವೇಶಕ್ಕೆ ನಡೆಯುವ ಜೆಇಇ (ಮೇನ್ಸ್‌) ಪರೀಕ್ಷೆಗೆ ಸರಾಸರಿ 9 ಲಕ್ಷದಷ್ಟು ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳುತ್ತಾರೆ.

ADVERTISEMENT

‘ಸಿಯುಇಟಿಗೆ (ಯುಜಿಸಿ) ಹೆಸರು ನೋಂದಾಯಿಸಿರುವ ವಿದ್ಯಾರ್ಥಿಗಳ ಈ ಪೈಕಿ 8.1 ಲಕ್ಷ ಮೊದಲ ಹಂತ, 6.80 ಲಕ್ಷ ವಿದ್ಯಾರ್ಥಿಗಳು ಎರಡನೇ ಹಂತದಲ್ಲಿ ಪರೀಕ್ಷೆ ಬರೆಯಲಿದ್ದಾರೆ. ದೇಶದ 90 ವಿಶ್ವವಿದ್ಯಾಲಯಗಳಲ್ಲಿ 54,555 ವಿಷಯಗಳ ವಿಶಿಷ್ಟ ಸಂಯೋಜನೆಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಈ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ’ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೀಶ್‌ ಕುಮಾರ್‌ ಮಾಹಿತಿ ನೀಡಿದರು.

ಪರೀಕ್ಷೆಯ ಮೊದಲ ಹಂತ ಜುಲೈನಲ್ಲಿ ಹಾಗೂ ಎರಡನೇ ಹಂತ ಆಗಸ್ಟ್‌ನಲ್ಲಿ ನಡೆಯಲಿದೆ. ಭೌತ ವಿಜ್ಞಾನ, ರಸಾಯನ ವಿಜ್ಞಾನ ಅಥವಾ ಜೀವ ವಿಜ್ಞಾನ ವಿಷಯಗಳನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಎರಡನೇ ಹಂತದಲ್ಲಿ ಪರೀಕ್ಷೆಗಳು ನಡೆಯಲಿವೆ. ಈ ವಿಷಯಗಳನ್ನು ಆಯ್ಕೆ ಮಾಡಿರುವ ವಿದ್ಯಾರ್ಥಿಗಳಿಗೆ ಜುಲೈ 17ರಂದು ‘ನೀಟ್‌–ಯುಜಿ’ ಪರೀಕ್ಷೆಗಳೂ ಜರುಗಲಿವೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಈ ಪರೀಕ್ಷೆ ನಡೆಸುತ್ತಿದ್ದು, ವಿದ್ಯಾರ್ಥಿಗಳ ಅಂಕಗಳನ್ನು ಪರ್ಸೈಂಟಲ್‌ ರೂಪದಲ್ಲಿ ನೀಡಲಾಗುತ್ತದೆ ಎಂದು ಕುಮಾರ್‌ ತಿಳಿಸಿದರು.

ದೇಶದಲ್ಲಿನ 44 ಕೇಂದ್ರೀಯ ವಿ.ವಿ, 12 ರಾಜ್ಯ ವಿ.ವಿ, 11 ಡೀಮ್ಡ್‌ ವಿ.ವಿ ಮತ್ತು 19 ಖಾಸಗಿ ವಿ.ವಿಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಆವೃತ್ತಿಯ ಸಿಯುಇಟಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.