ಜಮ್ಮು/ಶ್ರೀನಗರ: ಜಮ್ಮು–ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸುವ ನಿರ್ಧಾರ ತಾತ್ಕಾಲಿಕವಾದದ್ದು. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಪ್ರದೇಶಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
ನಗರದ ಹೃದಯ ಭಾಗದಲ್ಲಿರುವ ಎಂ.ಎ.ಎಂ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಜಮ್ಮು–ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವ ಏಕೈಕ ಪಕ್ಷವೆಂದರೆ ಬಿಜೆಪಿ’ ಎಂದು ಪುನರುಚ್ಚರಿಸಿದರು.
ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ‘ಜಮ್ಮು–ಕಾಶ್ಮೀರದ ಜನರಿಗೆ ಅವರ ಹಕ್ಕುಗಳನ್ನು ನಿರಾಕರಿಸುವ ಮೂಲಕ ಈ ಎರಡು ಪಕ್ಷಗಳು ಗಾಯದ ಬರೆ ಎಳೆದಿವೆ’ ಎಂದರು.
‘ಬಿಜೆಪಿಗೆ ಸ್ಪಷ್ಟ ಬಹುಮತ’: ಸ್ಪಷ್ಟ ಬಹುಮತ ಪಡೆಯುವ ಮೂಲಕ ಬಿಜೆಪಿ, ಜಮ್ಮು–ಕಾಶ್ಮೀರದಲ್ಲಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎನ್‌ಸಿ ಮತ್ತು ಪಿಡಿಪಿಗೆ ಜನರ ಅಭಿವೃದ್ಧಿ ಬೇಕಿಲ್ಲ. ಈ ಕಾರಣಕ್ಕೆ ಜಮ್ಮು–ಕಾಶ್ಮೀರದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಅಸಮಾಧಾನ ಹೊಂದಿವೆ.ನರೇಂದ್ರ ಮೋದಿ, ಪ್ರಧಾನಿ
ಚುನಾವಣಾ ಫಲಿತಾಂಶ ಹಾಗೂ ವಿಜಯದಶಮಿಗೂ ಸಂಬಂಧ ಬೆಸೆದ ಮೋದಿ, ‘ಬದಲಾವಣೆಗೆ ಇದು ಒಳ್ಳೆಯ ಸಮಯ. ಈ ಅವಕಾಶವನ್ನು ಕಳೆದುಕೊಳ್ಳದೇ, ಎಲ್ಲರೂ ಮತ ಚಲಾಯಿಸಬೇಕು’ ಎಂದು ಮನವಿ ಮಾಡಿದರು.
‘ಸರ್ಜಿಕಲ್ ಸ್ಟ್ರೈಕ್’ ಪ್ರಸ್ತಾಪ
2016ರಲ್ಲಿ ನಡೆಸಿದ್ದ ‘ಸರ್ಜಿಕಲ್ ಸ್ಟ್ರೈಕ್’ ಕುರಿತು ಪ್ರಸ್ತಾಪಿಸಿದ ಮೋದಿ ‘ಉಗ್ರರು ಪಾತಾಳದಲ್ಲಿಯೇ ಅಡಗಿರಲಿ ಮೋದಿ ಅವರನ್ನು ಹುಡುಕುತ್ತಾರೆ ಎಂಬುದನ್ನು ಭಯೋತ್ಪಾದಕರನ್ನು ಪೋಷಿಸುತ್ತಿರುವವರಿಗೆ ಗೊತ್ತಿದೆ’ ಎಂದರು.
‘ಇಂದು ಸೆ.28. 2016ರಲ್ಲಿ ಇದೇ ದಿನ ‘ಸರ್ಜಿಕಲ್ ಸ್ಟ್ರೈಕ್’ ನಡೆದಿತ್ತು. ಇದು ನೂತನ ಭಾರತ ಹಾಗೂ ಶತ್ರುಗಳ ಮನೆ ಹೊಕ್ಕು ಅವರನ್ನು ಹೊಡೆಯುತ್ತದೆ ಎಂಬ ಸಂದೇಶವನ್ನು ಜಗತ್ತಿಗೆ ಭಾರತ ರವಾನಿಸಿತ್ತು’ ಎಂದರು.
‘ನನ್ನ ಸರ್ಕಾರ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದ ನಂತರ ಕಾಂಗ್ರೆಸ್ ಪಕ್ಷ ಈ ಕಾರ್ಯಾಚರಣೆ ಕುರಿತು ಪುರಾವೆ ಕೇಳಿತ್ತು. ‘ಸರ್ಜಿಕಲ್ ಸ್ಟ್ರೈಕ್’ ಕುರಿತು ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ಧಾಟಿಯಲ್ಲಿಯೇ ಮಾತನಾಡುತ್ತದೆ. ಇಂತಹ ಮಾತುಗಳನ್ನಾಡುವ ಕಾಂಗ್ರೆಸ್ ಪಕ್ಷವನ್ನು ನೀವು ಕ್ಷಮಿಸುತ್ತೀರಾ’ ಎಂದು ಜನರನ್ನು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.