ADVERTISEMENT

ಕರ್ನಾಟಕ-ಮಹಾರಾಷ್ಟ್ರ ಗಡಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ: ಠಾಕ್ರೆ

ಡೆಕ್ಕನ್ ಹೆರಾಲ್ಡ್
Published 27 ಜನವರಿ 2021, 19:40 IST
Last Updated 27 ಜನವರಿ 2021, 19:40 IST
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ   

ಮುಂಬೈ (ಪಿಟಿಐ): ಗಡಿ ವಿವಾದ ಕುರಿತಂತೆ ಸುಪ್ರೀಂಕೋರ್ಟ್‌ ತನ್ನ ಅಂತಿಮ ತೀರ್ಪು ಪ್ರಕಟಿಸುವವರೆಗೆ ಕರ್ನಾಟಕದಲ್ಲಿ ಮರಾಠಿ ಮಾತನಾಡು
ವವರು ಇರುವ ಕರ್ನಾಟಕದ ಗಡಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶ ಎಂಬುದಾಗಿ ಘೋಷಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬುಧವಾರ ಹೇಳಿದರು.

ಡಾ.ದೀಪಕ್ ಪವಾರ್ ಬರೆದಿರುವ ಮರಾಠಿ ಪುಸ್ತಕ ‘ಮಹಾರಾಷ್ಟ್ರ ಕರ್ನಾಟಕ ಸೀಮಾವಾದ್‌: ಸಂಘರ್ಷ್‌ ಅಣಿ ಸಂಕಲ್ಪ್‌’ (ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಹೋರಾಟ ಮತ್ತು ಪ್ರತಿಜ್ಞೆ) ಹೆಸರಿನ 530 ಪುಟಗಳ ಕೃತಿಯನ್ನು ಬಿಡುಗಡೆ ಮಾಡಿದ ಬಳಿಕ ಠಾಕ್ರೆ ಮಾತನಾಡಿದರು.

‘ಕರ್ನಾಟಕದಲ್ಲಿ ಮರಾಠಿ ಭಾಷೆ
ಯನ್ನು ಮಾತನಾಡುವವರು ಇರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ನಾವು ಗಡಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಗೆಲ್ಲಲು ಹೋರಾಟ ಮಾಡಲೇಬೇಕಿದೆ’ ಎಂದರು.

ADVERTISEMENT

‘ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ಅಲ್ಲಿನ ಸರ್ಕಾರ ದೌರ್ಜನ್ಯವೆಸಗುತ್ತಿದೆ’ ಎಂದೂ ಆರೋಪಿಸಿದರು.

‘ಗಡಿ ವಿವಾದ ಕುರಿತ ಪ್ರಕರಣದ ವಿಚಾರಣೆ ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ. ಹೀಗಿದ್ದರೂ, ಕರ್ನಾಟಕ ಸರ್ಕಾರ ಬೆಳಗಾಂವ ಅನ್ನು ಬೆಳಗಾವಿ ಎಂಬುದಾಗಿ ಬದಲಾಯಿಸಿದೆ. ಅಲ್ಲಿ, ಶಾಸನ ಸಭೆಯ ಕಟ್ಟಡ ನಿರ್ಮಿಸಿ, ಅದನ್ನು ಎರಡನೇ ರಾಜಧಾನಿ ಎಂದು ಘೋಷಿಸುತ್ತದೆ. ಅಲ್ಲಿ ವಿಧಾನಸಭೆಯ ಅಧಿವೇಶವನ್ನೂ ನಡೆಸುತ್ತದೆ. ಇದು ನ್ಯಾಯಾಂಗ ನಿಂದನೆ ಅಲ್ಲವೇ’ ಎಂದು ಪ್ರಶ್ನಿಸಿದರು.

‘ಮಹಾರಾಷ್ಟ್ರ ಏಕೀಕರಣ ಸಮಿತಿ ತನ್ನ ಒಗ್ಗಟ್ಟನ್ನು ಕಳೆದುಕೊಳ್ಳುತ್ತಿದೆ. ತನ್ನ ರಾಜಕೀಯ ಹಿತಾಸಕ್ತಿಗಾಗಿ ಮರಾಠಿ ಜನರ ಹಿತವನ್ನು ಬಲಿ ಕೊಡುತ್ತಿದೆ’ ಎಂದು ಆರೋಪಿಸಿದರು.

ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಮಾತನಾಡಿ, ‘ಗಡಿ ವಿವಾದ ಕುರಿತಂತೆ ಅಧ್ಯಯನ ನಡೆಸಲು ರಚಿಸಿದ್ದ ಮಹಾಜನ್‌ ಆಯೋಗ ನೀಡಿದ ವರದಿಯನ್ನು ಆಗಿನ ಮುಖ್ಯಮಂತ್ರಿ ವಸಂತರಾವ್‌ ನಾಯ್ಕ್ ಒಪ್ಪಿಕೊಂಡರು. ಆದರೆ, ಆಯೋಗವು ನೂರಕ್ಕೆ ನೂರರಷ್ಟು ಮಹಾರಾಷ್ಟ್ರ ವಿರೋಧಿಯಾಗಿತ್ತು’ ಎಂದರು.

‘ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ನಡೆಸುವುದೇ ರಾಜ್ಯದ ಕೈಯಲ್ಲಿರುವ ಕೊನೆಯ ಅಸ್ತ್ರ. ಹೀಗಾಗಿ ಕಾನೂನಿನ ಎಲ್ಲ ಆಯಾಮಗಳ ಮೂಲಕ ಹೋರಾಟ ನಡೆಸಿ, ಗೆಲ್ಲಬೇಕು’ ಎಂದೂ ಪ್ರತಿಪಾದಿಸಿದರು.

ಸಭೆ: ಪುಸ್ತಕ ಬಿಡುಗಡೆ ಸಮಾರಂಭದ ನಂತರ, ಗಡಿ ವಿವಾದ ಕುರಿತ ಉನ್ನತಾಧಿಕಾರ ಸಮಿತಿ ಸಭೆ ನಡೆಯಿತು.

ಈ ಸಭೆಯಲ್ಲಿ ಮಾತನಾಡಿದ ಉದ್ಧವ್‌ ಠಾಕ್ರೆ, ‘ಕರ್ನಾಟಕ ಸರ್ಕಾರ ಗಡಿ ಪ್ರದೇಶಗಳಲ್ಲಿ ಮರಾಠಿ ಭಾಷೆ
ಯನ್ನು ನಾಶ ಮಾಡುತ್ತಿದೆ. ಇದನ್ನು ತಡೆಯಬೇಕು’ ಎಂದು ಹೇಳಿದರು.

‘ಗಡಿ ವಿವಾದಕ್ಕೆ ಸಂಬಂಧಿಸಿದ ಕಾನೂನು ಘಟಕವು ಸಚಿವರು, ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕಾನೂನು ಹೋರಾಟಕ್ಕೆ ಸಂಬಂಧಿಸಿದಂತೆ ನಿಗಾ ಇರಿಸಬೇಕು ಎಂದು ಮುಖ್ಯಮಂತ್ರಿ ಅವರು ಘಟಕದ ಸಮನ್ವಯಕಾರ ಹಾಗೂ ಸಚಿವ ಏಕನಾಥ್‌ ಶಿಂಧೆ ಅವರಿಗೆ ಸೂಚಿಸಿದರು’ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ. ಸಂಪುಟ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಜನರ ದಿಕ್ಕು ತಪ್ಪಿಸಲು ಉದ್ಧವ್ ಠಾಕ್ರೆ ಯತ್ನ: ರಮೇಶ ಜಾರಕಿಹೊಳಿ

ಬೆಳಗಾವಿ: ‘ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಡಿ ವಿಷಯ ಮುಂದಿಟ್ಟುಕೊಂಡು ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇಲ್ಲಿ ಬುಧವಾರ ತಿರುಗೇಟು ನೀಡಿದರು.

ಗಡಿ ವಿವಾದ ಕುರಿತು ಉದ್ಧವ್ ಠಾಕ್ರೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಶಿವಸೇನಾದ ಕಾರ್ಯಸೂಚಿಗಳಿಗೆ ರಾಜ್ಯದಲ್ಲಿ ಮಹತ್ವ ನೀಡುವ ಅಗತ್ಯವಿಲ್ಲ’ ಎಂದರು.

‘ಪ್ರಚೋದನೆ ನೀಡುವುದೇ ಶಿವಸೇನಾದ ಮುಖ್ಯ ಕಾರ್ಯಸೂಚಿ. ಜನಪ್ರಿಯತೆ ಕುಗ್ಗುತ್ತಿರುವುದರಿಂದ ಅವರು ಕಂಗಾಲಾಗಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಹಾಗೂ ಮರಾಠಿ ಭಾಷಿಗರು ಸೌಹಾರ್ದದಿಂದ ಇದ್ದೇವೆ. ನಮ್ಮಲ್ಲಿ ತಾರತಮ್ಯ ಇಲ್ಲ. ಎಲ್ಲ ರಂಗದಲ್ಲೂ ವಿಫಲವಾಗಿರುವ ಠಾಕ್ರೆ, ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಗಡಿ ವಿಚಾರವನ್ನು ಕೆದಕುತ್ತಿದ್ದಾರೆ. ಮಹಾಜನ್‌ ವರದಿಯನ್ನು ಈಗಾಗಲೇ ಒಪ್ಪಲಾಗಿದೆ. ಅದೇ ಅಂತಿಮ’ ಎಂದು ಹೇಳಿದರು.

ಗಡಿ ವಿಷಯದಲ್ಲಿ ಮಹಾರಾಷ್ಟ್ರದಲ್ಲಿ ವಿವಿಧ ಪಕ್ಷಗಳ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ, ‘ನಮ್ಮಲ್ಲೂ ಗಡಿ ವಿಚಾರದಲ್ಲಿ ಎಲ್ಲ ನಾಯಕರೂ ಒಂದೇ ಆಗಿದ್ದೇವೆ. ನಾಡು–ನುಡಿ ಕಾಯಲು ಬದ್ಧವಾಗಿದ್ದೇವೆ. ರಾಜ್ಯದಲ್ಲಿ ಗಡಿ ಉಸ್ತುವಾರಿ ಸಚಿವರನ್ನು ನೇಮಿಸುವ ಅಗತ್ಯವಿಲ್ಲ. ಗಡಿ ಸಂರಕ್ಷಣೆಗೆ ಇಡೀ ಸಚಿವ ಸಂಪುಟ ಬದ್ಧವಾಗಿದೆ. ಕೇಂದ್ರ ಸರ್ಕಾರದ ಮಟ್ಟದಲ್ಲೂ ಸಮರ್ಥವಾಗಿ ನಿಭಾಯಿಸುತ್ತೇವೆ. ಮಹಾರಾಷ್ಟ್ರದಲ್ಲಿ ಗಡಿ ವಿವಾದ ಕುರಿತು ಪುಸ್ತಕ ಬಿಡುಗಡೆ ಮಾಡಿದ್ದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ’ ಎಂದರು.

***

ಬೆಳಗಾವಿ ಎಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯನ್ನು ಬೆಳಗಾವಿಯಲ್ಲಿ ನಿಷೇಧಿಸುವಂತೆ ಮುಖ್ಯಮಂತ್ರಿಯನ್ನು ಆಗ್ರಹಿಸುವೆ.

- ಶ್ರೀಮಂತ ಪಾಟೀಲ,ಜವಳಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.