ADVERTISEMENT

ಕೇಂದ್ರ ಸರ್ಕಾರದ ವೈಫಲ್ಯ ಮರೆಮಾಚಲು ದಲಿತ ಚಳವಳಿಗೆ ಮಸಿ: ಜಿಗ್ನೇಶ್ ಮೆವಾನಿ

ಪಿಟಿಐ
Published 30 ಆಗಸ್ಟ್ 2018, 19:56 IST
Last Updated 30 ಆಗಸ್ಟ್ 2018, 19:56 IST
ಜಿಗ್ನೇಶ್ ಮೆವಾನಿ
ಜಿಗ್ನೇಶ್ ಮೆವಾನಿ   

ನವದೆಹಲಿ : ‘ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ದಲಿತ ಚಳವಳಿಗೆ ಮಸಿ ಬಳಿಯುತ್ತಿದೆ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಆರೋಪಿಸಿದ್ದಾರೆ.

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಸಾಮಾಜಿಕ ಹೋರಾಟಗಾರರನ್ನು ಬಂಧಿಸಿದ್ದರ ವಿರುದ್ಧ ಹೊರಡಿಸಿರುವ ಜಂಟಿ ಹೇಳಿಕೆಯಲ್ಲಿ ಈ ಆರೋಪವಿದೆ. ಜಂಟಿ ಹೇಳಿಕೆಗೆ ಲೇಖಕಿ ಅರುಂಧತಿ ರಾಯ್, ವಕೀಲ ಪ್ರಶಾಂತ್ ಭೂಷಣ್ ಮತ್ತು ಸಾಮಾಜಿಕ ಹೋರಾಟಗಾರ ಅರುಣ್ ರಾಯ್ ಸಹಿ ಮಾಡಿದ್ದಾರೆ.

‘ಕೋರೆಗಾಂವ್ ವಿಜಯೋತ್ಸವವು ದಲಿತರಿಗೆ ಸಂಬಂಧಿಸಿದ್ದು. ದಲಿತ ಚಳವಳಿಗೂ ನಕ್ಸಲರಿಗೂ ಸರ್ಕಾರ ಸಂಬಂಧ ಕಲ್ಪಿಸಿದೆ. ಇದರ ವಿರುದ್ಧ ಸೆಪ್ಟೆಂಬರ್ 5ರಂದು ದಲಿತರು ದೇಶದಾದ್ಯಂತ ಪ್ರತಿಭಟನೆ ಮತ್ತು ರ‍್ಯಾಲಿಗಳನ್ನು ನಡೆಸಲಿದ್ದಾರೆ’ ಎಂದು ಮೆವಾನಿ ಘೋಷಿಸಿದ್ದಾರೆ.

ADVERTISEMENT

‘ಪುಣೆ ಪೊಲೀಸರು ಎಲ್ಲ ನಿಯಮಾವಳಿಗಳನ್ನು ಉಲ್ಲಂಘಿಸಿ, ಹೋರಾಟಗಾರರನ್ನು ಬಂಧಿಸಿದ್ದಾರೆ. ತಪ್ಪೆಸಗಿರುವ ಪೊಲೀಸರ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಹೋರಾಟಗಾರರ ಲ್ಯಾಪ್‌ಟಾಪ್, ಮೊಬೈಲ್‌ಗಳನ್ನು ಹಿಂತಿರುಗಿಸಬೇಕು’ ಎಂದು ಅರುಂಧತಿ ರಾಯ್ ಒತ್ತಾಯಿಸಿದ್ದಾರೆ.
**
ಕಾರಣ ಬಹಿರಂಗಪಡಿಸಿ: ಕಾಂಗ್ರೆಸ್ ಆಗ್ರಹ
‘ಸಾಮಾಜಿಕ ಹೋರಾಟಗಾರರನ್ನು ಒಮ್ಮಿಂದೊಮ್ಮೆಲೆ ಬಂಧಿಸಿದ್ದರ ಹಿಂದಿನ ಕಾರಣವನ್ನು ಸರ್ಕಾರವು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

‘ಕಾರಣವನ್ನು ಬಹಿರಂಗಪಡಿಸದ್ದಿದ್ದರೆ, ಇದನ್ನು ರಾಜಕೀಯ ದ್ವೇಷ ಎಂದೇ ಕರೆಯಬೇಕಾಗುತ್ತದೆ’ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಹೇಳಿದ್ದಾರೆ.

‘ಆ ಹೋರಾಟಗಾರರ ವಿಚಾರಗಳನ್ನು ನಾವು ಒಪ್ಪದೇ ಇರಬಹುದು. ಅವರ ವಿಚಾರಗಳಿಗೆ ನಮ್ಮ ವಿರೋಧವೂ ಇರಬಹುದು. ಆದರೆ ಅವರು ತಮ್ಮದೇ ವಿಚಾರ/ದೃಷ್ಟಿಕೋನಗಳನ್ನು ಹೊಂದಿರಬಾರದು ಎಂಬ ಕೇಂದ್ರ ಸರ್ಕಾರದ ನಿಲುವನ್ನು ಮಾತ್ರ ನಾವು ಒಪ್ಪುವುದಿಲ್ಲ’ ಎಂದು ತಿವಾರಿ ಸ್ಪಷ್ಟಪಡಿಸಿದ್ದಾರೆ.

‘ತನ್ನ ಚಿಂತನೆಗಿಂತ ಭಿನ್ನವಾದ ಚಿಂತನೆಗಳು ಇರಲೇಬಾರದು ಎಂಬಂತೆ ಈ ಸರ್ಕಾರ ವರ್ತಿಸುತ್ತಿದೆ. ನೀವು ಬಿಜೆಪಿಯನ್ನು ಪ್ರಶ್ನಿಸಿದ ತಕ್ಷಣ ನಿಮ್ಮನ್ನು ದೇಶವಿರೋಧಿ ಎನ್ನಲಾಗುತ್ತದೆ. ಸರ್ಕಾರವನ್ನು ವಿರೋಧಿಸಿದ ತಕ್ಷಣ ನಿಮ್ಮನ್ನು ದೇಶದ್ರೋಹಿ ಎಂದು ಕರೆಯಲಾಗುತ್ತದೆ. ವ್ಯವಸ್ಥೆಯನ್ನು ಪ್ರಶ್ನಿಸಿದರೆ ನೀವು ಸಂಚುಕೋರ ಆಗುತ್ತೀರಿ’ ಎಂದು ಅವರು ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
**

ಬಂಧಿತರು ನಕ್ಸಲರ ಮಾರ್ಗದರ್ಶಕರು: ಬಿಜೆಪಿ
‘ಬಂಧಿತರಲ್ಲಿ ಕೆಲವರು ನಕ್ಸಲರ ಮಾರ್ಗದರ್ಶಕರು. ದಶಕಗಳಿಂದ ವಿಚಾರವಾದಿಗಳ ಮುಖವಾಡ ಧರಿಸಿಕೊಂಡು ನಕ್ಸಲರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಭೀಮಾ ಕೋರೆಗಾಂವ್ ಹಿಂಸಾಚಾರವು ಇವರ ಮಾರ್ಗದರ್ಶನದ ಫಲ’ ಎಂದು ಬಿಜೆಪಿಯ ತೆಲಂಗಾಣ ಘಟಕದ ವಕ್ತಾರ ಕೃಷ್ಣ ಸಾಗರ್ ರಾವ್ ಆರೋಪಿಸಿದ್ದಾರೆ.

ಸರ್ಕಾರ ರಾಜಕೀಯ ದ್ವೇಷದಿಂದ ಇವರನ್ನು ಬಂಧಿಸಿದೆ ಎಂದು ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಅವರು ಹೇಳಿದ್ದಾರೆ.

‘ಇವರ ವಿರುದ್ಧ ಪ್ರಕರಣ ದಾಖಲಿಸಿರುವುದು ತನಿಖಾ ಸಂಸ್ಥೆಗಳೇ ಹೊರತು, ಸರ್ಕಾರವಲ್ಲ. ಹೀಗಿದ್ದ ಮೇಲೆ ಇಲ್ಲಿ ರಾಜಕೀಯ ದ್ವೇಷದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇವರನ್ನು ನಾವು ರಾಜಕೀಯ ವಿರೋಧಿಗಳು ಎಂದೂ ಪರಿಗಣಿಸುವುದಿಲ್ಲ. ಇವರು ಪ್ರಜಾಪ್ರಭುತ್ವ, ಭಾರತ ಸಂವಿಧಾನ, ದೇಶದ ಏಕತೆ ಮತ್ತು ಸಾರ್ವಭೌಮತೆಯ ವಿರೋಧಿಗಳು ಎಂದು ನಾವು ಪರಿಗಣಿಸುತ್ತೇವೆ’ ಎಂದು ಅವರು ವಿವರಿಸಿದ್ದಾರೆ.

‘ಎಡಪಕ್ಷಗಳಿಗೆ ದೇಶ, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಚುನಾಯಿತ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಆದರೆ ಅವರ ಆಟ ಇಲ್ಲಿ ನಡೆಯುವುದಿಲ್ಲ. ಸಮಾಜದ ಯಾವುದೋ ಒಂದು ವರ್ಗದಲ್ಲಿ ವಿಷತುಂಬಿ, ಸಾಮಾಜಿಕ ಸಾಮರಸ್ಯವನ್ನು ಹಾಳುಮಾಡಲು ಇವರು ಮುಂದಾದರೆ ನಮ್ಮ ಸರ್ಕಾರ ಸುಮ್ಮನೆ ಕೂರುವುದಿಲ್ಲ’ ಎಂದು ಅವರು ಕಿಡಿಕಾರಿದ್ದಾರೆ.
**
ಇಂದು ದೇಶದಲ್ಲಿ ಇದೆಲ್ಲಾ ನಡೆಯುತ್ತಿದೆ. ಇದು ತುರ್ತುಪರಿಸ್ಥಿತಿಗಿಂತಲೂ ಅತ್ಯಂತ ಅಪಾಯಕಾರಿಯಾದ ಪರಿಸ್ಥಿತಿ
–ಪ್ರಶಾಂತ್ ಭೂಷಣ್, ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.