ADVERTISEMENT

ಮುಂಬೈ | ಪಟಾಕಿ ಸಿಡಿಸುವ ವಿಚಾರಕ್ಕೆ ವ್ಯಕ್ತಿಯ ಕೊಲೆ; ಮಹಿಳೆ ಸೇರಿ ಐವರ ಬಂಧನ

ಪಿಟಿಐ
Published 1 ನವೆಂಬರ್ 2024, 12:49 IST
Last Updated 1 ನವೆಂಬರ್ 2024, 12:49 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮುಂಬೈ: ಪಟಾಕಿ ಸಿಡಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಜಗಳವಾಗಿ 20 ವರ್ಷದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಮುಂಬೈನಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದಿದೆ. ಈ ಸಂಬಂಧ ಮಹಿಳೆ ಸೇರಿದಂತೆ ಐವರನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದಾರೆ.

ಅಂತೊಪ್‌ ಹಿಲ್‌ ಪ್ರದೇಶದಲ್ಲಿ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ವಿವೇಕ್‌ ಗುಪ್ತಾ ಎಂದು ಗುರುತಿಸಲಾಗಿದೆ.

ADVERTISEMENT

ಕೊಲೆ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಕ್ರಿ ಅಗರ್‌ನ ಜೈ ಮಹಾರಾಷ್ಟ್ರ ನಗರದ ಕಿರಿದಾದ ರಸ್ತೆಯಲ್ಲಿ ಒಂದು ಗುಂಪು ಗುರುವಾರ ಮಧ್ಯರಾತ್ರಿ ಪಟಾಕಿ ಸಿಡಿಸುತ್ತಿತ್ತು. ಆ ವೇಳೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಕಾರ್ತಿಕ್‌ ಆರ್‌ ಮೋಹನ್‌ ದೇವೇಂದ್ರ ಎಂಬಾತ, ಬೇರೆ ಕಡೆ ಹೋಗಿ ಪಟಾಕಿ ಸಿಡಿಸುವಂತೆ ಹೇಳಿದ್ದ. ಇದರಿಂದ ಕೆರಳಿದ ಗುಂಪು, ಆತನಿಗೆ ಥಳಿಸಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸ್ಥಳದಿಂದ ತೆರಳಿದ್ದ ದೇವೇಂದ್ರ ಕೆಲ ಹೊತ್ತಿನ ಬಳಿಕ ಪತ್ನಿ, ಸಹೋದರ ಹಾಗೂ ಇನ್ನೂ ಕೆಲವರೊಂದಿಗೆ ದೊಣ್ಣೆಗಳು, ಕ್ರಿಕೆಟ್‌ ಬ್ಯಾಟ್‌ಗಳೊಂದಿಗೆ ಬಂದಿದ್ದ. ಎರಡೂ ಗುಂಪಿನ ನಡುವೆ ಗಲಾಟೆಯಾಗಿತ್ತು. ಈ ವೇಳೆ, ಪಟಾಕಿ ಸಿಡಿಸುತ್ತಿದ್ದ ಗುಂಪಿನಲ್ಲಿದ್ದ ಒಬ್ಬ ಚಾಕು ತೆಗೆದಿದ್ದ. ಆದರೆ, ಅದು ಆತನ ಕೈಯಿಂದ ಜಾರಿ ಕೆಳಗೆ ಬಿದ್ದಿತ್ತು. ದೇವೇಂದ್ರನೊಂದಿಗೆ ಬಂದಿದ್ದ ರಾಜ್‌ ಪುತ್ತಿ ಎಂಬಾತ, ಕೂಡಲೇ ಚಾಕು ತೆಗೆದುಕೊಂಡು ವಿವೇಕ್‌ಗೆ ಹಲವು ಸಲ ಇರಿದಿದ್ದ ಎಂದು ದಾಖಲಿಸಲಾಗಿದೆ.

ಗಲಾಟೆ ನಡೆಯುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ವಿವೇಕನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆತ ಮೃತಪಟ್ಟಿದ್ದಾನೆ. ಕಾರ್ತಿಕ್‌ ಆರ್‌ ಮೋಹನ್‌ ದೇವೇಂದ್ರ, ಕಾರ್ತಿಕ್‌ ಕುಮಾರ್‌ ದೇವೇಂದ್ರ, ವಿಕ್ಕಿ ಮುತ್ತು ದೇವೇಂದ್ರ, ಮಿನಿಯಪ್ಪನ್‌ ರವಿ ದೇವೇಂದ್ರ ಹಾಗೂ ದೇವೇಂದ್ರನ ಪತ್ನಿ ಬಂಧಿತರು. ಇನ್ನಷ್ಟು ಆರೋಪಿಗಳಿಗಾಗಿ ಬಲೆ ಬೀಸಿದ್ದೇವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಅಂತೊಪ್‌ ಹಿಲ್‌ ಠಾಣೆ ಪೊಲೀಸರು, ಕೊಲೆ ಹಾಗೂ ಇತರ ಆರೋಪಗಳ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.