ADVERTISEMENT

ದೀಪಾವಳಿ ಸಂಭ್ರಮ: ದೇಶದಾದ್ಯಂತ ಹಲವೆಡೆ ಅಗ್ನಿ ಅವಘಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ನವೆಂಬರ್ 2024, 9:20 IST
Last Updated 1 ನವೆಂಬರ್ 2024, 9:20 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ದೇಶದಾದ್ಯಂತ ಜನರು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ದೀಪಗಳನ್ನು ಬೆಳಗಿ, ಪಟಾಕಿಗಳನ್ನು ಸಿಡಿಸಿ ಗುರುವಾರ ದೀಪಾವಳಿ ಆಚರಿಸಿದ್ದಾರೆ. ಆದರೆ, ಹಲವೆಡೆ ಅಗ್ನಿ ಅವಘಡಗಳು ಸಂಭವಿಸಿರುವುದು ವರದಿಯಾಗಿದೆ.

ತೆಲಂಗಾಣದ ಜಗತಿಯಾಲ್‌ನಲ್ಲಿ ರಾತ್ರಿ ಮಳಿಗೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ನಡೆಸಿದ್ದಾರೆ.

ADVERTISEMENT

ಗಾಜಿಯಾಬಾದ್‌ನ ಗಾರ್ಡೇನಿಯಾ ಗ್ಲಾಮರ್‌ ಸೊಸೈಟಿಯಲ್ಲಿರುವ ಕಟ್ಟಡವೊಂದರ ಬಾಲ್ಕನಿಯಲ್ಲಿ ಹಾಗೂ ಇಂದಿರಾಪುರಂನ ಗ್ಯಾನ್‌ಖಂಡ್‌ನಲ್ಲಿರುವ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಬಳಿಕ, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಸಿಸಮೌ ಪೊಲೀಸ್ ಠಾಣೆ ವ್ಯಾಪ್ತಿಯ ಫರ್ನಿಚರ್‌ ಮಳಿಗೆಯೊಂದರಲ್ಲಿ, ಅಗ್ನಿ ದುರಂತ ಸಂಭವಿಸಿ ಭಾರಿ ಹಾನಿಯಾಗಿದೆ.

ಬಿಹಾರದ ನಳಂದದಲ್ಲಿ ಪಟಾಕಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಮಳಿಗೆಯನ್ನು ಅಕ್ರಮವಾಗಿ ತೆರೆಯಲಾಗಿತ್ತು ಎಂದು ವರದಿಯಾಗಿದೆ.

ಕಳೆದ ಹತ್ತು ವರ್ಷಗಳಲ್ಲೇ ಅತಿ ಹೆಚ್ಚು ಎನಿಸುವಷ್ಟು ಕರೆಗಳು ದೀಪಾವಳಿಯಂದು ಬಂದಿವೆ. ನವೆಂಬರ್‌ 1ರ ವರೆಗೆ ಒಟ್ಟು 320 ಕರೆಗಳನ್ನು ಸ್ವೀಕರಿಸಲಾಗಿದೆ. ಅಗ್ನಿ ಸಂಬಂಧಿತ ದುರಂತದಲ್ಲಿ ಗುರುವಾರ ರಾತ್ರಿ ಮೂವರು ಮೃತಪಟ್ಟು, 12 ಜನರು ಗಾಯಗೊಂಡಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ದಳ ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಇಷ್ಟು ಅವಘಡಗಳು ಸಂಭವಿಸಿರುವುದರ ಜೊತೆಗೆ, ದೆಹಲಿಯ ಹಲವೆಡೆ ಗಾಳಿಯ ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 'ಕಳಪೆ' ಹಾಗೂ 'ಅತ್ಯಂತ ಕಳಪೆ' ಮಟ್ಟಕ್ಕೆ ಕುಸಿದಿರುವುದು ವರದಿಯಾಗಿದೆ.

'ಎಕ್ಯೂಐ' ಮಟ್ಟವು ಸೊನ್ನೆಯಿಂದ 50 ರಷ್ಟಿದ್ದರೆ 'ಉತ್ತಮ' ಎಂದು, 51ರಿಂದ 100 ರಷ್ಟಿದ್ದರೆ 'ಸಮಾಧಾನಕರ', 101 ರಿಂದ 200 ರಷ್ಟಿದ್ದರೆ 'ಸಾಧಾರಣ', 201 ರಿಂದ 300 ರಷ್ಟಿದ್ದರೆ 'ಕಳಪೆ' ಹಾಗೂ 301 ರಿಂದ 400 ರಷ್ಟಿದ್ದರೆ 'ಅತ್ಯಂತ ಕಳಪೆ' ಎನ್ನಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ 'ತೀವ್ರ ಕಳಪೆ' ಹಾಗೂ 450ಕ್ಕಿಂತ ಹೆಚ್ಚಾದರೆ 'ಅತ್ಯಂತ ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.

ದೆಹಲಿ ಜೊತೆಗೆ, ಹರಿಯಾಣ, ಪಂಜಾಬ್‌ನಲ್ಲಿಯೂ 'ಎಕ್ಯೂಐ' ಮಟ್ಟ ಗುರುವಾರ ಹದಗೆಟ್ಟಿದೆ. ಹರಿಯಾಣ, ಪಂಜಾಬ್‌ ಸರ್ಕಾರವು, ದೀಪಾವಳಿಯಂದು ನಿಗದಿತ ಸಮಯದಲ್ಲಿ ಹಸಿರು ಪಟಾಕಿ ಸಿಡಿಸುವುದಕ್ಕಷ್ಟೇ ಅನುಮತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.