ADVERTISEMENT

ಜೆಎನ್‌ಯುಗೆ ಭೇಟಿ ನೀಡಿದ್ದಕ್ಕೆ ದೀಪಿಕಾ ದೇಶದ್ರೋಹಿ ಆಗಿಬಿಟ್ಟರಾ:ಕನ್ಹಯ್ಯ ಕುಮಾರ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 14:48 IST
Last Updated 9 ಜನವರಿ 2020, 14:48 IST
ಕನ್ಹಯ್ಯ ಕುಮಾರ್
ಕನ್ಹಯ್ಯ ಕುಮಾರ್   

ನವದೆಹಲಿ: ಜೆಎನ್‌ಯುನಲ್ಲಿ ಭಾನುವಾರ ನಡೆದ ಮುಸುಕುಧಾರಿಗಳ ದಾಂದಲೆ ಹಿಂದೆ ಸರ್ಕಾರದ ಬೆಂಬಲಿಗರ ಕೈವಾಡವಿದೆ ಎಂದು ಜೆಎನ್‌ಯು ಮಾಜಿ ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಆರೋಪಿಸಿದ್ದಾರೆ.

ಗುರುವಾರ ದೆಹಲಿಯ ಮಂಡಿ ಹೌಸ್‌ನಿಂದ ರಾಷ್ಟ್ರಪತಿ ಭವವಕ್ಕೆ ಜೆಎನ್‌ಯು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಈ ವೇಳೆಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಕನ್ಹಯ್ಯ, ದೊಡ್ಡ ದೊಡ್ಡ ವ್ಯಕ್ತಿಗಳು ಬಂದು ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಾರೆ ಎಂದು ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಪ್ರಧಾನಿ ನರೇಂದ್ರ ಮೋದಿಗಾಗಿ ಪ್ರಚಾರ ಮಾಡುವಾಗ ಆಕೆ ದೇಶಭಕ್ತಳಾಗಿದ್ದಳು ಆದರೆ ಜೆಎನ್‌ಯುಗೆ ಭೇಟಿ ನೀಡಿದ ಕೂಡಲೇ ದೇಶದ್ರೋಹಿ ಆಗಿ ಬಿಟ್ಟಳು. ಆಕೆ ಜೆಎನ್‌ಯುಗೆ ಬಂದು ಯಾವುದೇ ಘೋಷಣೆ ಕೂಗಿಲ್ಲ. ಯಾರೊಬ್ಬರ ಹೆಸರನ್ನೂ ಹೇಳಲಿಲ್ಲ. ಆಕೆ ಮೌನವಾಗಿದ್ದಳು. ಗಾಯಗೊಂಡ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಹೋದಳು. ಆದರೆ ಈಗ ಅವರು (ಬಿಜೆಪಿಯವರು) ಹೇಳುತ್ತಿದ್ದಾರೆ ಆಕೆಯ ಸಿನಿಮಾವನ್ನು ನೋಡಲ್ಲ ಎಂದು. ಆಕೆಯ ಯಾವುದೇ ಪಕ್ಷದ ಹೆಸರು ಹೇಳಿಲ್ಲ, ಸಿದ್ಧಾಂತ ಹೇಳಿಲ್ಲ ಅಥವಾ ಘೋಷಣೆ ಕೂಗಿಲ್ಲ. ಹೀಗಿರುವಾಗ ಅವಳ ಸಿನಿಮಾಕ್ಕೆ ಬಹಿಷ್ಕಾರ ಯಾಕೆ? ಅಂದರೆ ಜೆಎನ್‌ಯುನಲ್ಲಿ ನಡೆದ ದಾಂದಲೆಯಲ್ಲಿ ಸರ್ಕಾರದ ಬೆಂಬಲಿಗರು ಭಾಗಿಯಾಗಿದ್ದಾರೆ ಎಂಬುದು ಅರ್ಥ ಅಲ್ಲವೇ ಎಂದಿದ್ದಾರೆ ಕನ್ಹಯ್ಯ.

ದೀಪಿಕಾ ಪಡುಕೋಣೆಯನ್ನು ಟೀಕಿಸಿದ ಉಪಕುಲಪತಿ ಎಂ. ಜಗದೇಶ್ ಕುಮಾರ್ವಿರುದ್ಧ ಕಿಡಿ ಕಾರಿದ ಕನ್ಹಯ್ಯ, ದೀಪಿಕಾ ಜೆಎನ್‌ಯುವಿನ ಉಪಕುಲಪತಿ ಅಲ್ಲ, ಜೆಎನ್‌ಯು ಉಪಕುಲಪತಿ ನೀವು ಎಂದಿದ್ದಾರೆ.

ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ಉಪಕುಲಪತಿಯವರು ಭೇಟಿ ಮಾಡಬೇಕಿತ್ತು. ಇದು ಹೇಗೆ ಅಂದರೆ ನಿಮಗೆ ಸ್ವಂತ ಕಾರು ಖರೀದಿಸಲು ಸಾಧ್ಯವಾಗದೇ ಇರುವಾಗ ಪಕ್ಕದ ಮನೆಯವರು ಕಾರು ಖರೀದಿಸಿದರೆ ಅದರ ಬಣ್ಣ ಚೆನ್ನಾಗಿಲ್ಲ ಎಂದು ದೂರುವ ಹಾಗಿದೆ ಎಂದು ಕನ್ಹಯ್ಯ ಕುಮಾರ್ ಉಪಕುಲಪತಿ ವಿರುದ್ಧ ಗುಡುಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.